ಕಾಯಿ ಗೆಣಸೆಲೆ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:
ದೋಸೆ ಅಕ್ಕಿ: ಒಂದೂವರೆ ಕಪ್
ಬೆಣ್ಣೆ : ಎರಡು ದೊಡ್ಡ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಬೆಲ್ಲ : ಅರ್ಧ ಕಪ್
ಏಲಕ್ಕಿ ಪುಡಿ: ಅರ್ಧ ಚಮಚ
ಹಸಿ ತೆಂಗಿನಕಾಯಿ ತುರಿ : ಒಂದು ಕಪ್
ಮಾಡುವ ವಿಧಾನ:
ಒಂದೂವರೆ ಕಪ್ ಅಕ್ಕಿಯನ್ನು ನೀರಿನಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿಯಿಂದ ನೀರನ್ನು ಬಸಿದು ರುಬ್ಬುವ ಜಾರ್‌ಗೆ ವರ್ಗಾಯಿಸಿ. ಬಹಳಕಡಿಮೆ ಪ್ರಮಾಣದಲ್ಲಿ ನೀರನ್ನು ಸೇರಿಸಿ. ಅಕ್ಕಿಯನ್ನು ನುಣ್ಣಗೆ ಆದರೆ ದಪ್ಪವಾಗಿ ರುಬ್ಬಿ. ಮಾಡಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ೨ ದೊಡ್ಡ ಚಮಚ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ. ಬೇಕಿದ್ದಲ್ಲಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿ.
ಇನ್ನೊಂದು ಪಾತ್ರೆಗೆ ತುರಿದ ಹಸಿ ತೆಂಗಿನಕಾಯಿ ಮತ್ತು ಬೆಲ್ಲವನ್ನು ಹಾಕಿ, ಹಾಗೆಯೇ ಅರ್ಧ ಚಮಚ ಏಲಕ್ಕಿ ಪುಡಿಯನ್ನು ಕೂಡ ಸೇರಿಸಿ, ಚೆನ್ನಾಗಿ ಕಲಸಿ. ಬಾಳೆ ಎಲೆಯನ್ನು ಬೆಂಕಿಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ. ನಂತರ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಸವರಿ. ಈಗ ಬಾಳೆ ಎಲೆ ಮೇಲೆ ಮಾಡಿಟ್ಟ ಅಕ್ಕಿ ಹಿಟ್ಟನ್ನು ಸಮವಾಗಿ ಹರಡಿ. ಅರ್ಧ ಭಾಗಕ್ಕೆ ಮಾಡಿಟ್ಟ ಬೆಲ್ಲ–ಕಾಯಿಯ ಮಿಶ್ರಣವನ್ನು ಹಾಕಿ ಹರಡಿ. ಮಧ್ಯದಲ್ಲಿ ಮಡಚಿ.
ಇಡ್ಲಿ ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿ ಬಂದ ಮೇಲೆ, ಮಡಚಿಟ್ಟ ಬಾಳೆಎಲೆಗಳನ್ನು ಪಾತ್ರೆಯೊಳಗೆ ಇರಿಸಿ, ಹಬೆಯಲ್ಲಿ ಹದಿನೈದು ನಿಮಿಷ ಬೇಯಿಸಿ. ಬಿಸಿ ಬಿಸಿ ಕಾಯಿ ಗೆಣಸಲೆಯನ್ನು ತುಪ್ಪದ ಜೊತೆ ಸವಿಯಿರಿ