ಕಾಯಕ ಹಾಗೂ ದಾಸೋಹ ಬಸವಾದಿ ಶರಣರು ನೀಡಿದ ಎರಡು ಅಮೂಲ್ಯವಾದ ತತ್ವಗಳು:ಧುಲಂಗೆ

ಕಲಬುರಗಿ,ಮೇ.01: ಕಾಯಕ ಹಾಗೂ ದಾಸೋಹ ಬಸವಾದಿ ಶರಣರು ನೀಡಿದ ಎರಡು ಅಮೂಲ್ಯವಾದ ತತ್ವಗಳು. ನಾವು ದುಡಿದು ಉಣ್ಣಬೇಕು ಎನ್ನುವುದು ಶರಣರ ನಿಯಮವಾಗಿತ್ತು. ದುಡಿಯದವರಿಗೆ ಉಣ್ಣುವ ಹಕ್ಕಿಲ್ಲ ಎಂದು ಪ್ರತಿಪಾದನೆ ಮಾಡಿ, ದುಡಿಮೆಗೆ ಕಾಯಕದ ಘನತೆ ತಂದುಕೊಟ್ಟವರು ನಮ್ಮ ವಚನಕಾರರು ಎಂದು ಹಿರಿಯ ಶರಣ ಸಾಹಿತಿ ಎಸ್.ಎಂ.ಧುಲಂಗೆ ಹೇಳಿದರು.
ಕಾಯಕ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ವಿವಿಧ ಕಾಯಕಜೀವಿಗಳಿಗೆ ಸತ್ಕರಿಸಿ ಮಾತನಾಡಿದ ಅವರು, ನಾವು ಮಾಡುವ ಕಾಯಕದಿಂದ ಬಂದ ಹಣ ಸಮಾಜಕ್ಕೆ ಅಶಕ್ತರು, ದುರ್ಬಲರಿಗೆ ದಾಸೋಹ ಮಾಡಿ, ತಾನು ಬಳಸಬೇಕು ಎಂದು ಶರಣರು ಸಾರಿದ್ದರು ಎಂದ ಅವರು, ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸಾರಥ್ಯದಲ್ಲಿ ಪರಿಷತ್ತಿನ ವತಿಯಿಂದ ವೈವಿದ್ಯಮಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಾಮಾನ್ಯರ ಬಳಿ ಪರಿಷತ್ತು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವ ತತ್ವದಲ್ಲಿ ವಿಶ್ವದ ಸಕಲ ಸಮಸ್ಯೆಗಳಿಗೂ ಪರಿಹಾರ ಇದೆ. ಅವುಗಳನ್ನು ಅಳವಡಿಸಿಕೊಂಡರೆ ಬದುಕು ಬಂಗಾರವಾಗುವುದು. ಬಸವಾದಿ ಶರಣರು ಕೊಟ್ಟ ವಚನ ಸಾಹಿತ್ಯ ಅತ್ಯಂತ ಮೌಲಿಕ ಸಾಹಿತ್ಯವಾಗಿದೆ. ಶರಣರ ಒಂದೇ ಒಂದು ವಚನ ಅಳವಡಿಸಿಕೊಂಡರೂ ಜೀವನ ಸಾರ್ಥಕವಾಗುತ್ತದೆ ಎಂದರು.
ಕೊಪ್ಪಳ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ನಾಗರಜ ಹೆಬ್ಬಾಳ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಪದಾಧಿಕಾರಿಗಳಾದ ಶಕುಂತಲಾ ಪಾಟೀಲ, ಸಿದ್ಧಲಿಂಗ ಬಾಳಿ, ಧರ್ಮಣ್ಣಾ ಎಚ್.ಧನ್ನಿ, ಕಸಾಪ ಕಾಳಗಿ ತಾಲೂಕಾಧ್ಯಕ್ಷ ಸಂತೋಷ ಕುಡಳ್ಳಿ, ಪ್ರಮುಖರಾದ ಡಾ. ನಾಗವೇಣಿ ಪಾಟೀಲ, ವಿಶಾಲಾಕ್ಷಿ ಮಾಯಣವರ್, ಸುನೀಲ್ ಹಡಪದ್, ಎಂ.ಎನ್ ಸುಗಂಧಿ, ಬಸ್ವಂತರಾಯ ಕೋಳಕೂರ, ಶ್ರೀಕಾಂತ ಪಾಟೀಲ ತಿಳಗೂಳ, ವಿನೋದ ಜೇನವೇರಿ, ವಿಶ್ವನಾಥ ತೊಟ್ನಳ್ಳಿ, ಪ್ರಭವ ಪಟ್ಟಣಕರ್, ಎಸ್ ಎಂ ಪಟ್ಟಣಕರ್, ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾಜದ ಶುದ್ಧತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವಿವಿಧ ಕಾಯಕಜೀವಿಗಳಾದ ರೇವಣಸಿದ್ಧಪ್ಪ ಗು ಹಡಪದ, ಶೇರ್ ಅಲಿ, ಸರೋಜಿನಿ ರಾಜು ಕಟಬರ್, ಸಂಗೀತಾ ಕೋರೆ, ನಾಗೇಶ ಅವರನ್ನು ಪರಿಷತ್ತಿನ ವತಿಯಿಂದ ವಿಶೇಷವಾಗಿ ಸತ್ಕರಿಸಲಾಯಿತು.