ಕಾಯಕ ಶರಣದ ಜಯಂತಿ ಆಚರಣೆ :ಅಧಿಕಾರಿಗಳ ಗೈರು

ಸಿಂದಗಿ:ಫೆ.11: ಸತ್ಯ ಶರಣರ ಸಂತರ ದಾಸರ ಕಾಯಕ ಯೋಗಿಗಳ ಮತ್ತು ದೇಶಕ್ಕಾಗಿ ಮಡಿದ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಬಸವಣ್ಣನವರು ಪ್ರತಿಯೊಂದು ಸಣ್ಣ ಸಮಾಜವನ್ನು ಮೇಲ್ಮಟ್ಟಕ್ಕೆ ಕೊಂಡ್ಯೊಯುವ ಕಾರ್ಯ ಮಾಡಿದ್ದಾರೆ ಆದರೆ ಕಾಯಕ ಶರಣರ ಜಯಂತಿಯ ದಿನ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಗೌರವ ತೋರಿಸಿದ್ದು ಖಂಡನೀಯ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಡೋಹರ್ ಕಕ್ಕಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಯಂತೋತ್ಸವ ಕಾರ್ಯಕ್ರಮದಂದು ವೃತ್ತಗಳು ಸ್ವಚ್ಛತೆಗೆ ಮುಂದಾದರೆ ಸಾಲದು ಮುಖ್ಯಾಧಿಕಾರಿಗಳು ಪಟ್ಟಣದ ವೃತ್ತಗಳನ್ನು ಪ್ರತಿ ದಿನ ಸ್ವಚ್ಚಗೊಳಿಸಲು ಸೂಚಿಸಬೇಕು. ತಾಲೂಕು ಆಡಳಿತ ಕೇವಲ ಜಯಂತಿಗಳನ್ನು ಕಾಟಾಚಾರಕ್ಕೆ ಆಚರಣೆ ಮಾಡದೇ ಮುಂದಿನ ಯುವ ಜನಾಂಗಕ್ಕೆ ಮಾದರಯಾಗುವಂತೆ ಆಚರಣೆಯಾಗಲಿ ಎಂದರು.
ನಂತರ ಸಾಯಬಣ್ಣ ದೇವರಮನಿ ಮತ್ತು ಸಾಯಬಣ್ಣ ಪುರದಾಳ ಮಾತನಾಡಿ, ಬಸವಣ್ಣನವರ ಹಲವು ವಚನಗಳಲ್ಲಿ ಜಾತಿ ಮತ್ತು ವೃತ್ತಿಗಳ ಕುರಿತಾಗಿ ಹೇಳಿದ್ದಾರೆ. ಜಾತಿಗೆ ಪ್ರಾಮುಖ್ಯತೆ ನೀಡದೆ ಅವರ ವೃತ್ತಿಗೆ ಮಹತ್ವ ನೀಡಬೇಕು ಎಂದು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾರಿ ಹೇಳಿದ್ದಾರೆ. ಶರಣರು ಕಾಯಕದ ಜೊತೆಗೆ ದಿನನಿತ್ಯ ವಚನಗಳನ್ನು ತಿದ್ದಿ ಅಸಮಾನತೆ ಮತ್ತು ಅಸ್ಪೃಶ್ಯತೆ ಹೊಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಶರಣರನ್ನು ಜಾತಿಯಿಂದ ಗುರುತಿಸಬೇಡಿ ಅವರ ವೃತ್ತಿಯಿಂದ ಗುರುತಿಸಬೇಕು ಮತ್ತು ಆಡಳಿತಕ್ಕೆ ಸಹಕಾರ ನೀಡಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ.ಮಕಾಂದಾರ, ರವಿಕಿರಣ ಕಟಕೆ, ಸುನಂದಾ ಯಂಪುರೆ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ರಾಜಕುಮಾರ ಭಾಸಗಿ, ರಾಜು ಗುಬ್ಬೇವಾಡ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.