ಕಾಯಕ ಯೋಜಯಿಂದ ಮಹಿಳೆಯರು ಸ್ವಾವಲಂಬಿ

ಕೋಲಾರ,ಜ.೧೧: ಇ-ಶಕ್ತಿ ಮಹಿಳಾ ಶಕ್ತಿಯಾದರೆ ‘ಕಾಯಕ ಯೋಜನೆ ಅವರನ್ನು ಸ್ವಾವಲಂಬಿ ಉದ್ಯಮಶೀಲರನ್ನಾಗಿಸಿ ಕಾಯುತ್ತದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು,ಮೇಲ್ವಿಚಾರಿಕರು,ಇ-ಶಕ್ತಿ ಅನುಷ್ಠಾನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಎಲ್ಲಾ ಇ-ಶಕ್ತಿ ಅನಿಮೇಟರ್ಸ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇ-ಶಕ್ತಿಯಿಂದ ವಹಿವಾಟಿನಲ್ಲಿ ಭ್ರಷ್ಟತೆ ತೊಡೆದು ಹಾಕಿ ಪಾರದರ್ಶಕತೆಗೆ ಕಾರಣವಾಗುವುದರಿಂದ ಮಹಿಳೆಯರ ನಂಬಿಕೆ ಬಲಗೊಳ್ಳುತ್ತದೆ ಎಂದ ಅವರು, ಎರಡು ದಿನದೊಳಗೆ ನಬಾರ್ಡ್ ಸೂಚಿಸಿರುವ ಎಲ್ಲಾ ೭ಸಾವಿರ ಮಹಿಳಾ ಸಂಘಗಳ ಮಾಹಿತಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಇ-ಶಕ್ತಿ ಹೊಣೆ ಹೊತ್ತ ಸಿಬ್ಬಂದಿ ತಮಗೆ ನೀಡಿರುವ ಗುರಿ ಸಾಧಿಸದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಇಚ್ಚಾಶಕ್ತಿ ಮತ್ತು ಬದ್ದತೆ ಇಲ್ಲದಿದ್ದರೆ ಹೀಗೆ ಆಗುತ್ತದೆ, ನಿಮಗೆ ಅನ್ನ ನೀಡುವ ಬ್ಯಾಂಕಿನ ಋಣ ತೀರಿಸಿ ಎಂದು ತಾಕೀತು ಮಾಡಿದರು.
ಇ-ಶಕ್ತಿ ಯೋಜನೆ ಅನುಷ್ಟಾನದ ಹೊಣೆಹೊತ್ತ ಪ್ರೇರಕರು(ಅನಿಮೇಟರ್ಸ್) ತಿಂಗಳ ನಾಲ್ಕೈದು ದಿನ ಕೆಲಸ ಮಾಡಿದರೆ ಸಾಕು, ವಾರದ ಸಭೆ ಮಾಹಿತಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ, ಈ ಕಾರ್ಯ ವಿಳಂಬಮಾಡಿದರೆ ಶೇ.೨೫ ರಷ್ಟು ಸಂಭಾವನೆ ಕಡಿತಗೊಳ್ಳುತ್ತದೆ ಎಂದು ಎಚ್ಚರಿಸಿದರು.ಸೊಸೈಟಿಗಳು ಶೇ.೯೦ ರಷ್ಟು ಗಣಕೀಕರಣವಾಗಿದೆ, ವಹಿವಾಟು ಕೇವಲ ೬೦ ರಷ್ಟು ಮಾತ್ರ ಮಾಡುತ್ತಿದ್ದಾರೆ, ಆದ್ದರಿಂದ ಜ.೨೬ ರೊಳಗೆ ಶೇ.೧೦೦ ಗಣಕೀಕರಣ ಮತ್ತು ಆನ್‌ಲೈನ್ ವಹಿವಾಟು ನಡೆಯಬೇಕು ಎಂದು ಸೂಚಿಸಿದರು.
ಮಹಿಳೆಯರ ವಹಿವಾಟು ಆಗಿಂದಾಗಲೇ ದಾಖಲಾಗಿ ಅವರ ಕೈಗೆ ಪಾಸ್‌ಬುಕ್ ನೀಡಿದರೆ ಅವರ ನಂಬಿಕೆ ಬಲಗೊಳ್ಳುತ್ತದೆ, ಅವರು ಹಣ ಸಂದಾಯ ಮಾಡಿದ್ದಕ್ಕೆ ಮೊಬೈಲ್‌ಗೆ ಮೆಸೇಜ್ ಹೋಗಲಿ ಇದರಿಂದ ಸೊಸೈಟಿಗಳ ಭ್ರಷ್ಟತೆಗೆ ಕಡಿವಾಣ ಬೀಳುತ್ತದೆ ,ಕಾಯಕ ಯೋಜನೆಯಡಿ ಮಹಿಳಾ ಸಂಘಗಳಿಗೆ ೫ ಲಕ್ಷ ಬಡ್ಡಿರಹಿತ ಸಾಲ ಮತ್ತು ಬಡ್ಡಿಯ ೫ ಲಕ್ಷ ಸಾಲ ಭದ್ರತೆ ಇಲ್ಲದೇ ಸಿಗುತ್ತದೆ,ಹೈನುಗಾರಿಕೆ, ಮಿನಿಡೈರಿ ಆರಂಭಿಸಿ ಉದ್ಯಮಶೀಲರಾದರೆ ಅವರ ಬದುಕನ್ನು ಯೋಜನೆ ಕಾಯುತ್ತದೆ ಎಂದರು. ೩೦ ಸಂಘಗಳ ೩೦೦ ಮಂದಿ ಒಂದು ಯುನಿಟ್ ಆಗಿ ಒಂದಾಗಿ ಬಂದರೆ ೩ ಕೋಟಿವರೆಗೂ ಸಾಲ ನೀಡಬಹುದಾಗಿದೆ, ಇದರಿಂದ ಉದ್ಯಮಶೀಲರಾಗಬಹುದು, ನಿರುದ್ಯೋಗ ಸಮಸ್ಯೆಗೂ ಕಡಿವಾಣವಾಗಿ ತಾಯಂದಿರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.
ಬ್ಯಾಂಕ್ ಎಲ್ಲಾ ವಿಷಯಗಳಲ್ಲೂ ಸಾಧನೆ ಮಾಡಿದೆ ಆದರೆ ಠೇವಣಿ ಸಂಗ್ರಹದಲ್ಲಿ ನಾವು ಹಿಂದುಳಿದಿದ್ದೇವೆ, ಮಾರ್ಚ್ ವೇಳೆಗೆ ೭೦೦ ಕೋಟಿ ಸಂಗ್ರಹದ ಗುರಿ ಸಾಧನೆಗೆ ಶ್ರಮಿಸಿ ಎಂದು ತಾಕೀತು ಮಾಡಿದ ಅವರು, ಗ್ರಾಹಕರೊಂದಿಗೆ ಸಂಯಮದಿಂದ ವರ್ತಿಸಿ, ಅವರ ಪ್ರೀತಿ ಸಂಪಾದಿಸಿ ಠೇವಣಿ ಇಡಲು ಮುಂದೆ ಬರುತ್ತಾರೆ ಎಂದರು.
ಗೌರಿಬಿದನೂರು ಶಾಖೆ ಜಿಲ್ಲೆಗೆ ಮಾದರಿಯಾಗಿದೆ, ಅವರಂತೆ ಅಂದಿನ ವಹಿವಾಟು ಅಂದೇ ಆನ್‌ಲೈನ್‌ಗೆ ದಾಖಲಿಸುವ ಮೂಲಕ ಕೆಲಸದಲ್ಲಿ ಶಿಸ್ತು ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬ್ಯಾಂಕ್ ಎನ್‌ಪಿಎ ಶೇ.೨.೫ ಇದೆ ಇದನ್ನು ಶೇ.೧ಕ್ಕೆ ತರಬೇಕು, ಮಹಿಳಾ ಸಂಘಗಳಿಗೆ ನೀಡಿರುವ ಸಾಲ, ಕೆಸಿಸಿ,ಮಧ್ಯಮಾವಧಿ ಎಲ್ಲಾ ಸಾಲಗಳ ಮರುಪಾವತಿ ಮಾರ್ಚ್ ಕೊನೆ ವೇಳೆಗೆ ಸಮರ್ಪಕವಾಗಿರಬೇಕು ಎಂದು ಎಚ್ಚರಿಸಿದರು.
ಸಾಲ ಪಡೆದವರು ಎಷ್ಟೇ ಪ್ರತಿಷ್ಠಿತರಾಗಿರಲಿ ಮರುಪಾವತಿಯಲ್ಲಿ ವಿಳಂಬವಾದರೆ ಕೇಳಿ ವಸೂಲಿ ಮಾಡಿ, ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದರು.
ಚಿನ್ನದ ಸಾಲ ಹೆಚ್ಚು ನೀಡಿ ಎಂದು ಸಲಹೆ ನೀಡಿದಾಗ ಸಿಬ್ಬಂದಿಯೊಬ್ಬರು ಸಾಲದ ಮಿತಿಯನ್ನು ೧೦ ಲಕ್ಷಕ್ಕೇರಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಗೋವಿಂದಗೌಡರು, ಈ ಬಾರಿಯ ಆಡಳಿತ ಮಂಡಳಿ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯುವ ಸುಳಿವು ನೀಡಿದರು.
ಸೊಸೈಟಿಗಳ ಎಸ್‌ಎಸ್‌ಜಿ ಮತ್ತು ಕೆಸಿಸಿ ಸಾಲದ ಬಡ್ಡಿ ಬಿಲ್ಲುಗಳನ್ನು ಸೋಮವಾರ ಸಂಜೆ ವೇಳೆಗೆ ಮಂಡಿಸಲು ಸೂಚನೆ ನೀಡಿದ ಅವರು, ಸೊಸೈಟಿಗಳಿಗೆ ಬಡ್ಡಿಯ ಲಾಭ ೭ ಕೋಟಿ ಈವರೆಗೂ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಯ ಎಲ್ಲಾ ಶಾಖೆಗಳ ವ್ಯವಸ್ಥಾಪಕರು ತಮ್ಮ ಪಾಲಿನ ಠೇವಣಿ ಸಂಗ್ರಹದ ಗುರಿ ಸಾಧನೆ ಮಾಡುವುದಾಗಿ ಸಭೆಗೆ ತಿಳಿಸಿದರು.
ಸುಸ್ತಿ ಸಾಲಗಳ ವಸೂಲಾತಿ ಬಗ್ಗೆ ವಿಮರ್ಶೆ, ಠೇವಣಿ ಸಂಗ್ರಹ ಪ್ರಗತಿ ಪರೀಶೀಲನೆ, ಇ-ಶಕ್ತಿ ಯೋಜನೆ ಪ್ರಗತಿ, ಸ್ವಸಹಾಯ ಸಂಘಗಳು,ಕೆಸಿಸಿ,ಮಧ್ಯಮಾವಧಿ ಸಾಲಗಳ ಬಡ್ಡಿ ಸಹಾಯಧನ ಕ್ಲೈಮ್ ಬಿಲ್ಲುಗಳ ಕುರಿತು ಮತ್ತು ಸಹಕಾರ ಸಂಘಗಳ ಗಣಕೀಕರಣ ಪ್ರಗತಿ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಎಂಡಿ ರವಿ, ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಹುಸೇನ್‌ಸಾಬ್ ದೊಡ್ಡಮನಿ ಮತ್ತಿತರರಿದ್ದರು.