
ಇಂಡಿ;ಜು.30: ಕಾಯಕ ಎಂದರೆ ಬರೀ ಕೆಲಸವಲ್ಲ ಅದು ನಿಜವಾದ ನೆಮ್ಮದಿ,ನಿರಂತರವಾದ ಕಾಯಕ ಮಾತ್ರ ಮನುಷ್ಯನನ್ನು ಕಾಪಾಡುತ್ತದೆ ಎಂದು ಸಂಗಮೇಶ ಶಾಸ್ತ್ರಿ ಹೇಳಿದರು.
ಅವರು ಗುರುವಾರ ತಾಲೂಕಿನ ಗೊಳಸಾರ ಗ್ರಾಮದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಶ್ರೀ ಚಿನ್ಮಯಮೂರ್ತಿ ತ್ರೀಮೂರ್ತಿ ಶಿವಾನುಭ ಸಮಿತಿ ಹಮ್ಮಿಕೊಂಡ 177 ನೇ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸು,ಬುದ್ದಿ,ಧ್ಯಾನ ,ಭಕ್ತಿ ,ಆತ್ಮದಂತ ಸಂಗತಿಗಳು ಬಾಹ್ಯದಲ್ಲಿ ಕಾಣದಿದ್ದರು ಅಂತರಂಗದಿಂದ ಕಾಣುವಂತೆ ಮಾಡುವ ಕಲೆಗಾರಿಕೆ ಗುರುವಿಗಿದೆ.ಗುರುಭಕ್ತಿ ಸರ್ವಕಾಲಕ್ಕೂ ಶ್ರೇಷ್ಠವಾದದ್ದು,ಅಂತರಂಗವನ್ನು ಶುದ್ದಿಕರಿಸಿ ಬದುಕನ್ನು ಸುಂದರಗೊಳಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಅಂತಹ ಗುರು ಗೋಳಸಾರದ ಸದ್ಗರು ಪುಂಡಲಿಂಗ,ತ್ರೀಧರೇಶ್ವರ,ಅಭಿನವ ಪುಂಡಲಿಂಗ ಮಹಾಶಿವಯೋಗಿಳಲ್ಲಿ ಕಾಣಬಹುದು ಎಂದು ಹೇಳಿದರು.ನಮ್ಮ ದೇಶ ಸಾಧು,ಸಂತರು,ಶರಣರು,ಪುಣ್ಯಪುರುಷರು,ದಾರ್ಶನಕರ ಬೀಡು,ಅಧ್ಯಾತ್ಮೀಕ ಮತ್ತು ಯೋಗದ ನೆಲೆಯಾಗಿರುವ ಮತ್ತು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿರುವ ಭಾರತದ ನೆಲದಲ್ಲಿ ವಾಸಿಸುವವರೆಲ್ಲರು ಪುಣ್ಯವಂತರು ಎಂದು ಹೇಳಿದರು.
ಭಕ್ತಿಮಾರ್ಗದಲ್ಲಿ ನಡೆಯುವ ಮನುಷ್ಯ ಜೀವನದಲ್ಲಿ ಮುಕ್ತಿ ಪಡೆಯಬಲ್ಲ,ಶಿವಾನುಭವಗೋಷ್ಠಿಯೂ ಭಕ್ತರಿಗೆ ಧರ್ಮ ಸಂಸ್ಕಾರಗಳನ್ನು ನೀಡಿ ಧರ್ಮದ ಹಾದಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದು ಹೇಳಿದರು.
ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಯಲ್ಲಾಲಿಂಗ ಕಡಕೋಳ,ನಾಗಪ್ಪ ದೇವಕತೆ ದಾಸೋಹ ಸೇವೆ ನಡೆಸಿಕೊಟ್ಟರು.ಶಿವಲಿಂಗಪ್ಪ ನಾಗಠಾಣ ಸ್ವಾಗತಿಸಿದರು.ರವೀಂದ್ರ ಆಳೂರ ನಿರೂಪಿಸಿದರು.ಆಲಿಂಗರಾಯ ಕುಮಸಗಿ ವಂದಿಸಿದರು.ನಂತರ ಸಂಜೆ ನಡೆದ ಆಧ್ಯಾತ್ಮೀಕ ಪ್ರವಚನದಲ್ಲಿ ಮಾತೋಶ್ರಿ ಗುರುದೇವಿ ಅಮ್ಮನವರು ಪ್ರವಚನ ನೀಡಿದರು.