ಕಾಯಕ ಬಂಧುಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ.29: ಕಾಯಕ ಬಂಧುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ ಕೂಲಿಕಾರರಿಗೆ ಉದ್ಯೋಗ ಒದಗಿಸಿಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಮೀಮ್ ಬಾನು ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಕಾಯಕ ಬಂಧುಗಳಿಗೆ ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ದೇಶಿಸಿ ಅವರು ಮಾತನಾಡಿದರು.
ತಮ್ಮ ಗುಂಪಿನ ಕೆಲಸದ ಬೇಡಿಕೆಯನ್ನು ನಮೂನೆ-6ರಲ್ಲಿ ಪಡೆದು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಸ್ವೀಕೃತಿ ಪಡೆದು ಕಾಯಕ ಮಿತ್ರ ಆಪ್ ಮೂಲಕ ಕೆಲಸದ ಬೇಡಿಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕೂಲಿಕಾರರಿಗೆ ಕೆಲಸ ದೊರೆಯುವಂತೆ ಕ್ರಮವಹಿಸಬೇಕು ಎಂದು ಸೂಚಿಸಲಾಯಿತು. ಕೂಲಿಕಾರರಿಗೆ ಕಾಲಮಿತಿಯೊಳಗೆ ಕೂಲಿ ಹಣ ಪಾವತಿಯಾಗಲು ನೆರವಾಗಬೇಕು. ಜೊತೆಗೆ ನರೇಗಾ ಯೋಜನೆಯ ಐಇಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತರಬೇತಿಯಲ್ಲಿ ಕಾಯಕ ಬಂಧುಗಳಿಗೆ ಸೂಚಿಸಲಾಯಿತು.
ತಾಂತ್ರಿಕ ಸಂಯೋಜಕ ವೀರೇಶ್, ಐಇಸಿ ಸಂಯೋಜಕ ಹೆಚ್.ನಾಗರಾಜ್, ಎಮ್.ಐ.ಎಸ್ ಸಂಯೋಜಕ ಸಿದ್ದೇಶ್ವರ ಸೇರಿದಂತೆ ಹೊಸಪೇಟೆ ತಾಲ್ಲೂಕು ವ್ಯಾಪ್ತಿಯ 7 ಗ್ರಾಮ ಪಂಚಾಯತಿಯ ಕಾಯಕ ಬಂಧುಗಳು ಉಪಸ್ಥಿತರಿದ್ದರು.