ಕಾಯಕ ನಿಷ್ಠೆ, ಪ್ರಸಾದ ತತ್ವ ಸಾರಿದ ಶರಣ ಬಿಬ್ಬಿ ಬಾಚಯ್ಯ

ಕಲಬುರಗಿ:ಮಾ.28: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ಜರುಗಿದ ಚಳುವಳಿ ಐತಿಹಾಸಿಕವಾದದ್ದು. ಎಲ್ಲಾ ಶರಣರು ತಮ್ಮ-ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿದ್ದರು. ಶರಣ ಬಿಬ್ಬಿ ಬಾಚಯ್ಯನವರು ಅಶಕ್ತರು, ದುರ್ಬಲರಿಗೆ ಪ್ರಸಾದ ಹಂಚುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಅವರು ಕಾಯಕ ನಿಷ್ಠೆ, ಪ್ರಸಾದ ತತ್ವವನ್ನು ಸಾರಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶರಣ ಬಿಬ್ಬಿ ಬಾಚಯ್ಯನವರ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಬಾಚಯ್ಯನವರ ಜಯಂತಿಯನ್ನು ಆಚರಿಸಲಾಗುತ್ತದೆ. 'ಏಣಾಂಕಧರ ಸೋಮೇಶ್ವರ' ಎಂಬ ಅಂಕಿತನಾಮದೊಂದಿಗೆ ರಚಿಸಿದ 102 ವಚನಗಳು ಲಭ್ಯವಾಗಿವೆ. ಅದರಲ್ಲಿ ಬೆಡಗಿನ ವಚನಗಳಿವೆ. ಗುರು, ಲಿಂಗ, ಜಂಗಮ, ಕಾಯಕ, ಪ್ರಸಾದ, ಭಕ್ತಿ ಸೇರಿದಂತೆ ಅನೇಕ ವಿಷಯಗಳನ್ನು ಒಳಗೊಂಡಿವೆ. ವಿಶೇಷವಾಗಿ ಪ್ರಸಾದಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದ್ದು ಕಂಡುಬರುತ್ತದೆಯೆಂದರು.

   ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಮರ ಜಿ.ಬಂಗರಗಿ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.