ಕಾಯಕ ನಿಷ್ಠೆಯ ಸಮಾಜ ಸೇವಕಿ ಶರಣೆ ನೀಲಾಂಬಿಕಾ

ಕಲಬುರಗಿ:ನ.19: ಬಸವಣ್ಣನವರ ನೇತೃತ್ವದಲ್ಲಿ ಹನ್ನೆರಡನೇ ಶತಮಾನದಲ್ಲಿ ಜರುಗಿದ ‘ಸಾಮಾಜಿಕ ಕ್ರಾಂತಿ’ ವಿಶ್ವದ ಇತಿಹಾಸ ಪುಟಗಳಲ್ಲಿ ಅದ್ಭುತವಾದದ್ದು. ಇದರಲ್ಲಿ ಅನೇಕ ಶರಣ-ಶರಣಿಯವರು ಅವರ ಜೊತೆಗೂಡು ಶ್ರಮಿಸಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ನಿರಂತರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ, ಕಾಯಕ ನಿಷ್ಠೆಯ ಶರಣೆ ನೀಲಾಂಬಿಕಾ ಅವರು ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯಲ್ಲಿರುವ ಶಿವ ನಗರದಲ್ಲಿರುವ ‘ಎಂ.ಎಂ.ಎನ್. ಟ್ಯೂಟೋರಿಯಲ್ಸ್’ನಲ್ಲಿ, ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಶರಣೆ ನೀಲಾಂಬಿಕಾ ಅವರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಬಸವಣ್ಣನವರ ಪತ್ನಿಯಾಗಿ ಅವರ ಸಮಾಜಮುಖಿ ಕಾರ್ಯಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ತಮ್ಮ ಮಗ ಸಂಗಯ್ಯ ಬಾಲ್ಯದಲ್ಲಿಯೇ ಲಿಂಗೈಕ್ಯನಾದರು, ಅದನ್ನು ಮರೆತು ಸಮಾಜದ ಒಳಿತಿಗಾಗಿ ಹೋರಾಡುವ ಮೂಲಕ ಮಹಿಳಾ ಲೋಕ, ಸಮಾಜಕ್ಕೆ ಸಾರ್ವಕಾಲಿಕ ಮಾದರಿಯಾಗಿದ್ದಾರೆ. ‘ಸಂಗಯ್ಯ’ ಎಂಬ ಅಂಕಿತನಾಮದೊಂದಿಗೆ ವಚನಗಳನ್ನು ರಚಿಸಿದ್ದಾರೆ. ವೈಚಾರಿಕತೆ, ಭಕ್ತಿ, ಗುರು, ಲಿಂಗ, ಜಂಗಮ, ಲಿಂಗಾಂಗ ಸಾಮರಸ್ಯ, ಸಂಸ್ಕಾರ, ಆಚಾರ-ವಿಚಾರ, ಕಾಯಕ, ತಾಳ್ಮೆ ಸೇರಿದಂತೆ ಮುಂತಾದ ಅಂಶಗಳು ಅದರಲ್ಲಿ ಒಳಗೊಂಡಿವೆ. ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಪ್ರಮುಖರಾದ ಎಂ.ಬಿ.ನಿಂಗಪ್ಪ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ದೇಸಾಯಿ, ಸಿದ್ದರಾಮ ತಳವಾರ, ಬಸವಣ್ಣಪ್ಪ ಶೀರಿ, ಓಂಕಾರ ಗೌಳಿ,ವಿನೋದ ಎಸ್.ಮಾಳಾ, ಚರಣ ಚಿಮ್ಮಾದಿ, ಆಕಾಶ ಜಾನಕರ್, ಆದಿತ್ಯ ವಿ.ಅಂಬಲಗಿ ಸೇರಿದಂತೆ ಮತ್ತಿತರರು ಇದ್ದರು.