ಕಾಯಕ ನಮ್ಮ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ- ಚಂದೇಶ್ವರ ಸ್ವಾಮಿ


ಸಂಜೆವಾಣಿ ವಾರ್ತೆ
ಸಂಡೂರು : ಸೆ:1: ಕಾಯಕ ನಮ್ಮ ವ್ಯಕ್ತಿತ್ವ ಮತ್ತು ಶಕ್ತಿಯನ್ನು ಹೆಚ್ಚಿಸುವಂತಹ ಮಹತ್ತರವಾದುದು, ಅಂತಹ ಕಾಯಕವನ್ನು ಜಗತ್ತಿಗೆ ತೋರಿದವರು ಶರಣರು, ಅದರಲ್ಲಿ ಶಿವಶರಣ ನೂಲಿ ಚಂದಯ್ಯನವರು ಸಹ ಶ್ರೇಷ್ಠರು ಅವರ ಕಾಯಕ ತತ್ವವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಪ್ರಗತಿಯನ್ನು ಸಾಧಿಸೋಣ ಎಂದು ನೂಲಿ ಚಂದಯ್ಯ ಗುರುಪೀಠ, ಶಿವಣಗಿ ಮತ್ತು ನಂದಿಕ್ಷೇತ್ರ ತರಿಕೆರೆಯ ವೃಷಬೇಂದ್ರ ನೂಲಿ ಚಂದ್ರೇಶ್ವರ ಸ್ವಾಮಿಗಳು ಕರೆನೀಡಿದರು.
ಅವರು ಪಟ್ಟಣದ ವಾಲ್ಮೀಕಿ ಸಮುದಾಯಭವನದಲ್ಲಿ ಬಳ್ಳಾರಿ ಜಿಲ್ಲಾ ಕುಳುವ ಮಹಾಸಂಘ, ಸಂಡೂರು ತಾಲೂಕು ಕೊರವ, ಕೊರಮ, (ಕೊರಚ) ಸಮುದಾಯಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಚರಣ ನೂಲಿ ಚಂದಯ್ಯನವರ 916ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶರಣರು ನಮಗೆ ಅದರ್ಶ ಪ್ರಾಯರು, ಇಂದು ಪ್ರತಿಯೊಬ್ಬರೂ ಸಮಾನರು ಎನ್ನುವ ತತ್ವ, ಕಾಯಕ ಮತ್ತು ದಾಸೋಹ ತತ್ವಗಳು ನಮ್ಮ ಆದರ್ಶಗಳಾಗಬೇಕು ಅಂತಹ ಅದರ್ಶಗಳನ್ನು ಮೈಗೂಡಿಸಿಕೊಂಡ ಶರಣ ನೂಲಿಚಂದಯ್ಯನವರು ನಮಗೆ ದಾರಿದೀಪವಾಗಿದ್ದಾರೆ, ಇಂದು ಪ್ರತಿಯೊಬ್ಬರೂ ಸಹ ಒಗ್ಗಟ್ಟಿನಿಂದ ಅದರಲ್ಲೂ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸುಮಂಗಳಿಯರಾಗಿ ಬೆಳಗಿನಿಂದಲೇ ಚಂದಯ್ಯನ ಸೇವೆಗೆ ನಿಂತಿದ್ದು ನಿಮ್ಮ ನಿಸ್ವಾರ್ಥ ಸೇವಾಗುಣ ಪ್ರಕಟವಾಗುತ್ತಿದೆ, ಅದ್ದರಿಂದ ಪ್ರತಿಯೊಬ್ಬ ತಾಯಂದಿರು ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುವಂತಹ, ಕಾಯಕ ತತ್ವವನ್ನು ತಿಳಿಸುವ ಮೂಲಕ ಪ್ರಗತಿಯನ್ನು ಸಾಧಿಸಿ ಎಂದು ಕರೆನೀಡಿದರು.
ವಿಶೇಷ ಉಪನ್ಯಾಸವನ್ನು ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ ಯುವರು ನೂಲಿ ಚಂದಯ್ಯನವರ ಕಾಯಕ ಜೀವನ ಬದುಕು ಎನ್ನುವ ವಿಷಯಕುರಿತು ಮಾತನಾಡಿ ಕಂದಿಸಿ, ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದುಂದುಗದೋಗರ ಲಿಂಗಕ್ಕೆ ನಯವೇದ್ಯ ಸಲ್ಲ ಚಂಡೇಶ್ವರಲಿಂಗ ಎನ್ನವ ವಚನದ ಮೂಲಕ ಗುರು ಲಿಂಗ ಜಂಗಮ ಪೂಜೆಯನ್ನು ಶುದ್ದ ಕಾಯಕದ ಮೂಲಕ ಮಾಡಬೇಕು ಎನ್ನುವ ಮಹತ್ತರ ಅಂಶವನ್ನು ನೂಲಿ ಚಂದಯ್ಯನವರು ನೀಡಿದ್ದಾರೆ, ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಜನಸಿ ಹುಲ್ಲು ತಂದು ಅಗ್ಗವಮಾಡಿ ಶುದ್ದ ಕಾಯಕದ ಮೂಲಕ ದಾಸೋಹ ಮಾಡಿದ ಮಹಾನ್ ಶರಣ ಅವರು 48 ವಚನಗಳು ಬಹು ಮಹತ್ವಪೂರ್ಣವಾದವುಗಳಾಗಿದ್ದು ಅವುಗಳ ತಿರಳನ್ನು ಅರಿತು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲು ನಾವೆಲ್ಲರೂ ಪಾವನರಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಕೆ.ರಮೇಶ್, ಉಪಾಧ್ಯಕ್ಷ ಕೆ.ರಾಮಾಂಜಿನಿ, ಕೆ.ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಕೆ.ಶೇಖಪ್ಪ, ಸಹಕಾರ್ಯದರ್ಶಿ ಕೆ.ಜಂಬಯ್ಯ, ಕೆ.ಪರಸಪ್ಪ, ಕೆ.ಹುಲುಗಪ್ಪ, ಜಿಲ್ಲಾಉಪಾಧ್ಯಕ್ಷ ಕೆ.ಈರಣ್ಣ, ಕೆ.ದೊಡ್ಡಮಾರೆಪ್ಪ, ದೊಡ್ಡ ಹನುಮಂತಪ್ಪ, ದೊಡ್ಡ ರಾಮಣ್ಣ, ಸಣ್ಣಮಾರೆಪ್ಪ, ಕೆ.ಗುಡಿಪರಸಪ್ಪ, ಓಣಿ ರಮೇಶ್, ವೆಂಕಟೇಶ್, ಕೊಮಾರಪ್ಪ, ತಾಲೂಕಿನ ಚೋರನುರು, ವಿಠಲಾಪುರ, ತೋರಣಗಲ್ಲು, ರಾಜಾಪುರ, ಮೋತಲಕುಂಟೆ, ಹರಪನಹಳ್ಳಿ, ಅಂತಾಪುರ, ವಡ್ಡಿನಕಟ್ಟೆ ಇತರ ಗ್ರಾಮಗಳ ಎಲ್ಲಾ ಮುಖಂಡರು ಅಗಮಿಸಿ ಕಾರ್ಯಕ್ರಮ ನಡೆಸಿದರು.