ಕಾಯಕ ಜೀವಿಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಲಿ

ಕಲಬುರಗಿ:ಮೇ.1: ಬೆವರು ಹರಿಸಿ, ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವ ಕಾಯಕ ಜೀವಿಗಳ ಕೊಡುಗೆಯನ್ನು ಸಮಾಜ ಮರೆಯುವಂತಿಲ್ಲ. ಅವರಿಗೆ ಸೂಕ್ತ ಜೀವನ ಭದ್ರತೆ ದೊರಕಿಸಿ ಕೊಡಬೇಕಾದದ್ದು ಜವಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದು ಕಾರ್ಮಿಕ ಮುಖಂಡ ಓಂಕಾರ ವಠಾರ್ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಟವಾಗಿವೆ. ದುಡಿಯುವ ವರ್ಗ ಕನಿಷ್ಟ ಮತ್ತು ದುಡಿಸಿಕೊಳ್ಳುವ ವರ್ಗ ಗರಿಷ್ಟ ಎಂಬ ಮನೋಭಾವನೆಯನ್ನು ತೆಗೆದು ಕಾಯಕಕ್ಕೆ ದೈವತ್ವದ ಸ್ಥಾನವನ್ನು ನೀಡಿದ ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತರಕ್ಷಣೆಗಾಗಿ ಸಂವಿಧಾನದ ಮೂಲಕ ಕಾನೂನುಗಳನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಕಂಪ್ಯೂಟರ ಶಿಕ್ಷಕ ಸೈಯದ್ ಹಮೀದ್, ಯುವ ಸಮಾಜ ಸೇವಕ ರಮೇಶ ಮಾನೆ ಸೇರಿದಂತೆ ಇನ್ನಿತರರಿದ್ದರು.