ಕಾಯಕಸಂಸ್ಕøತಿ,ಸಮಾನತೆ ಸಾರಿದ ದೇವರ ದಾಸಿಮಯ್ಯ:ನಾರಾಯಣ ತೆಳಗಡಿ

(ಸಂಜೆವಾಣಿ ವಾರ್ತೆ)
ವಿಜಯಪುರ: ಜು.4:ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳೇ ತೀರ್ಥವೆಂಬ ಇಂಗಿತವನ್ನು ದಾಸಿಮಯ್ಯನವರ ವಚನಗಳು ಸೂಚಿಸುತ್ತವೆ ಎಂದು ಶಿಕ್ಷಕ ನಾರಾಯಣ ತೆಳಗಡಿ ಹೇಳಿದರು.
ಅವರು ರವಿವಾರ ಸಂಜೆ ನಗರದ ಪ್ರಸಾದ ಬಸರಕೊಡ ಅವರ ಮನೆಯಲ್ಲಿ ಜಿಲ್ಲಾ ದೇವಾಂಗ ಸಂಘದ ವತಿಯಿಂದ ಹಮ್ಮಿಕೊಂಡ ‘ಮನೆಯಂಗಳದಲ್ಲಿ ವಚನ’ ಎರಡನೇ ಮಾಸಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ತನ್ನನ್ನು ಒಳಗೊಂಡಂತೆ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ಹಿತನುಡಿಗಳು ಅವರ ವಚನಗಳಲ್ಲಿರುವುದು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಡಾ.ಸಂಗಮೇಶ ಮೇತ್ರಿ ಮಾತನಾಡಿ,ದೇವರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ. ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆವೃತ್ತಿಯ ಜೊತೆಗೆ, ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾಕಾಯಕ ಯೋಗಿಯಾಗಿದ್ದರು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಬಂಡೆ ಮಾತನಾಡಿ, ದಾಸಿಮಯ್ಯನವರ ವಚನಗಳು ಕಾಯಕನಿಷ್ಠೆ, ಶಿವತತ್ತ್ವ, ಲಿಂಗಸಮಾನತೆ, ಭಕ್ತಿತತ್ತ್ವಗಳಿಂದ ಕೂಡಿವೆ. ಕಾಯಕಸಂಸ್ಕೃತಿಯಲ್ಲಿ, ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದ ದಾಸಿಮಯ್ಯ- ದುಗ್ಗಳೆಯರ ಜೀವನ ದರ್ಶನಗಳು ಎಲ್ಲ ಕಾಲಕ್ಕೂ ಅನುಕರಣೀಯವಾಗಿವೆ ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಮಾತನಾಡಿದರು. ಮುಖಂಡರಾದ ನಾಗಪ್ಪ ಭಾವಿಕಟ್ಟಿ, ಕಲ್ಲಪ್ಪ ಮೇತ್ರಿ,ಗುರುಬಸಪ್ಪ ಯಡಹಳ್ಳಿ, ರವಿ ಕಂಠಿ, ನಾಗೇಶ ಬಸರಕೋಡ,ಬಸವರಾಜ ಹುಬ್ಬಳ್ಳಿ,ಪ್ರಸಾದ ಬಸರಕೋಡ, ಶ್ರೀಕಾಂತ ಕ್ಯಾತಪ್ಪನವರ,ಪ್ರವೀಣ ಬಸರಕೋಡ ಹಾಗೂ ಶಾಕಾಂಬರಿ ಮಹಿಳಾ ಸದಸ್ಯರಾದ ರೇಖಾ ಹಟಗಾರ, ರಾಜೇಶ್ವರಿ ಹಟಗಾರ,ಲಕ್ಶ್ಮೀ ಮೇತ್ರಿ,ಶ್ರುತಿ ಬಸರಕೋಡ, ಯಶೋದಾ ಬಸರಕೋಡ,ಕವಿತಾ ಹೋಕ್ರಾಣಿ,ರೂಪಾ ಬಸರಕೋಡ,ಕಲ್ಪನಾ ಕ್ಯಾತಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.