ಕಾಯಕಲ್ಪಕ್ಕಾಗಿ ಕಾದಿರುವ ನೀರು ಶುದ್ಧೀಕರಣ ಘಟಕ


ಲಕ್ಷ್ಮೇಶ್ವರ, ನ30: ಲಕ್ಷ್ಮೇಶ್ವರ ಪಟ್ಟಣಕ್ಕೆ ಹಾವೇರಿ ಜಿಲ್ಲೆಯ ಮೇವುಂಡಿ ತುಂಗಭದ್ರಾ ನದಿಯಿಂದ ಸುಮಾರು 36 ಕಿಲೋಮೀಟರ್ ಉದ್ದದ ಪೈಪ್‍ಲೈನ್ ಅಳವಡಿಸಿ ನೀರು ಪೂರೈಸುವ ಯೋಜನೆ ಸನ್ 2002ರಲ್ಲಿ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಶಾಸಕರಾಗಿದ್ದ ಜಿ. ಎಸ್. ಗಡ್ಡದೇವರಮಠ ಅವರು 16 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು.
ಈ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯವರು ಅನುಷ್ಠಾನಗೊಳಿಸಿದ್ದು ಈಗ ಯೋಜನೆ ಕಾರ್ಯಗತಗೊಂಡು 21 ವರ್ಷಗಳ ಬಳಿಕ ಸೂರಣಗಿಯಲ್ಲಿನ ನೀರು ಶುದ್ಧೀಕರಣ ಘಟಕದ ಯಂತ್ರಗಳು ದುರಸ್ಥಿಯಲ್ಲಿದ್ದು ಅದರಲ್ಲೂ ನೀರು ಶುದ್ಧೀಕರಣ ಮಾಡುವ ಮೂಲ ಯಂತ್ರವೇ ತುಕ್ಕು ಹಿಡಿದು ನದಿಯಿಂದ ನೀರು ಈಗ ಕೇವಲ ಆಲಂ ಬೆರೆಸಿ ನೀರು ಬಿಡುತ್ತಿದ್ದು ಶುದ್ಧೀಕರಣ ಅಷ್ಟಕ್ಕಷ್ಟೇ.
ಸೂರಣಗಿಯಲ್ಲಿನ ನೀರು ಶುದ್ಧೀಕರಣದ ಬಹುದೊಡ್ಡ ಟ್ಯಾಂಕು ಅದರ ಸುತ್ತಲೂ ಅಳವಡಿಸಿರುವ ಹಳಿ ಮತ್ತು ಶುದ್ಧೀಕರಣ ಮಾಡುವ ಫ್ಯಾನುಗಳು ಮೋಟಾರುಗಳು ಎಲ್ಲವೂ ತುಕ್ಕು ಹಿಡಿದು ಕಾಲಗರ್ಭ ಸೇರುವ ಹಂತದಲ್ಲಿವೆ. ಮಾರ್ಗಮಧ್ಯದ 36 ಕಿಲೋಮೀಟರ್ ಉದ್ದದ ಪೈಪ್ ಲೈನುಗಳು ಸಹ ಹಳೆಯದಾಗಿದ್ದು ಅವುಗಳನ್ನು ಸಹ ಹೊಸದಾಗಿ ಮಾಡುವ ಅವಶ್ಯಕತೆ ಇದೆ. ಒಟ್ಟಾರೆ ಸೂರಣಗಿಯಲ್ಲಿನ ನೀರು ಶುದ್ಧೀಕರಣ ಘಟಕ ಕಾಯಕಲ್ಪಕ್ಕಾಗಿ ಕಾದಿದೆ.
ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಸಂಜೆವಾಣಿಗೆ ಪ್ರತಿಕ್ರಿಯೆ ನೀಡಿ ಸೂರಣಗಿಯಲ್ಲಿನ ನೀರು ಶುದ್ಧೀಕರಣ ಘಟಕದ ಯಂತ್ರೋಪಕರಣಗಳ ಬದಲಾವಣೆಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಗೆ ಕುರಿತು ಯೋಜನಾ ವೆಚ್ಚ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಅದನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಅದನ್ನು ಮುನ್ಸಿಪಲ್ ಅನುದಾನದಲ್ಲಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಿದರು.