ಕಾಯಕದ ಜೊತೆಗೆ ಆರೋಗ್ಯದ ಕಡೆ ಗಮನವಿರಲಿ; ಸಿಇಒ ಸದಾಶಿವ ಪ್ರಭು


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ.14: ದೈಹಿಕ ಶ್ರಮವಹಿಸಿ ಮಾಡುವ ನರೇಗಾ ಕಾರ್ಮಿಕರು ತಮ್ಮ ಕಾಯಕದ ಜೊತೆಗೆ ಆರೋಗ್ಯದ ಕಡೆಗೂ ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಅವರು ಸಲಹೆ ನೀಡಿದರು.
ಹೊಸಪೇಟೆ ತಾಲ್ಲೂಕು ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯನಹಳ್ಳಿ ಗ್ರಾಮದ ಕೆರೆಯಲ್ಲಿ ಕೈಗೊಂಡ ನರೇಗಾ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಗ್ರಾಮ ಆರೋಗ್ಯ ತಪಾಸಣಾ ಶಿಬಿರಕ್ಕೆ ಅವರು ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ದೇಹ ದಂಡಿಸಿ ಕಾಯಕ ಮಾಡುವ ನಿಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಅಪರೂಪವಾಗಿದ್ದು, ನಿಯಮಿತ ಆಹಾರ ಜೊತೆಗೆ ಕಾಯಕ ಕೈಗೊಂಡು ಆರೋಗ್ಯವಂತರಾಗಬೇಕು. ಅದಕ್ಕೂ ಮುಖ್ಯವಾಗಿ ಶೌಚಾಲಯ ಬಳಸಿ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಬಹಿರ್ದೆಸೆ ಮುಕ್ತ ಗ್ರಾಮವಾಗಿಸಲು ಪಣತೊಡಬೇಕು ಎಂದರು.
ಗ್ರಾಮಗಳಲ್ಲಿ ಬಾಲ್ಯವಿವಾಹ ಪ್ರಕರಣ ಕಂಡುಬಂದಲ್ಲಿ ಅದನ್ನು ತಡೆಗಟ್ಟಲು ನಮ್ಮೊಂದಿಗೆ ಕೈಜೋಡಿಸಬೇಕು. ಅಂತಹ ಪೋಷಕರಿಗೆ ಜಾಗೃತಿ ಮೂಡಿಸಬೇಕು ಎಂದರು. ಗ್ರಾಮದ ಮಹಿಳೆಯರು ನರೇಗಾ ಕಾಮಗಾರಿಯಲ್ಲಿ ತೊಡಗಿಕೊಳ್ಳಬೇಕು ಎಂದು ಸೂಚಿಸಿದರು.
ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಇಲಾಖೆಯಿಂದ ಸಿಗುವ ಸೇವೆ, ಸೌಲಭ್ಯಗಳ ಕುರಿತು ಮಾಹಿತಿಯನ್ನು ಇಲಾಖಾ ಸಿಬ್ಬಂದಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ತಾಂತ್ರಿಕ ಸಂಯೋಜಕ ವೀರೇಶ ಹಿರೇಮಠ, ಬಸವರಾಜ್,  ಐಇಸಿ ಸಂಯೋಜಕ ನಾಗರಾಜ ಹೆಚ್, ತಾಂತ್ರಿಕ ಸಹಾಯಕಿ ಮಂಜುಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಕಾರ್ಯದರ್ಶಿ ಕನಕಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.