ಕಾಯಕದಿಂದ ಬದುಕು ಉಜ್ವಲ :  ರಂಭಾಪುರಿ ಶ್ರೀ

ಹಾವೇರಿ- ಮೇ 2: ಕೆಲಸ ಮಾಡಲು ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ. ಕಾಯಕದಿಂದ ಮನುಷ್ಯನ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರುಅವರು  ನಗರದ ಶ್ರೀ ಜಗದ್ಗುರು ರೇಣುಕ ಮಂದಿರದ ಗೋಪುರ ಕಳಸಾರೋಹಣ ಅಂಗವಾಗಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ತೊಡಕು ತೊಂದರೆಗಳು ಬರುವುದು ಸಹಜ. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಬೆವರು ಸುರಿಸಿ ದುಡಿಯದ ಹೊರತು ಯಶಸ್ಸು ಸಿಗುವುದಿಲ್ಲ. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ. ಉತ್ತಮ ನಡೆ ನುಡಿಗಳು ಜೀವನ ವಿಕಾಸಕ್ಕೆ ಸಹಕಾರಿಯಾಗುತ್ತವೆ. ಹುಡುಕುತ್ತ ಹೊರಟ ಧರ್ಮರಾಯನಿಗೆ ಕೆಟ್ಟವರು ಕಾಣಲಿಲ್ಲ. ಎಷ್ಟು ಹುಡುಕಿದರೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ದೃಷ್ಟಿಯಂತೆ ಸೃಷ್ಟಿ ಇರುತ್ತದೆ ಎಂಬುದನ್ನು ಯಾರೂ ಮರೆಯಬಾರದು. ಬದುಕೊಂದು ಕಿಡಕಿ ಇದ್ದಂತೆ. ಕಿಡಕಿ ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ. ಶ್ರಮಪಟ್ಟು ದುಡಿದರೆ ಸುಖ ಇಲ್ಲದಿದ್ದರೆ ದು:ಖ ತಪ್ಪಿದ್ದಲ್ಲ. ಒಳ್ಳೆಯದು ಕೆಟ್ಟದ್ದು ಎರಡು ನಮ್ಮೊಳಗೆ ಇವೆ. ಯಾವುದನ್ನು ನಾವು ಹೆಚ್ಚು ಬಳಸುತ್ತೇವೆಯೋ ಅದು ಬೆಳೆಯುತ್ತಾ ಹೋಗುತ್ತದೆ. ವೀರಶೈವ ಧರ್ಮದಲ್ಲಿ ಕಾಯಕ ಜೀವನಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಹಾವೇರಿ ಹೃದಯ ಭಾಗದಲ್ಲಿರುವ ಶ್ರೀ ಜಗದ್ಗುರು ರೇಣುಕ ಮಂದಿರ ಪುನರ್ ನವೀಕರಣಗೊಂಡು ನಿರ್ಮಾಣಗೊಂಡಿರುವುದು ಮತ್ತು ಸುಂದರ ಗೋಪುರ ನಿರ್ಮಾಣಗೊಂಡು ಇಂದು ಕಳಸಾರೋಹಣ ನೆರವೇರಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು. ಇದಕ್ಕಾಗಿ ಶ್ರಮಿಸಿದ ಸಮಸ್ತ ಸದಸ್ಯರಿಗೆ ಹಾಗೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಮತದಾನದ ಕುರಿತಾಗಿ ಮಾತನಾಡಿದ ಶ್ರೀ ರಂಭಾಪುರಿ ಜಗದ್ಗುರುಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಮತದಾನ ಮಾಡುವುದು ಮತ್ತು ಜನತೆಯ ಸಮಗ್ರ ಹಿತ-ಅಭಿವೃದ್ಧಿ ಬಯಸುವ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದುದು ಪ್ರತಿಯೊಬ್ಬ ಮತದಾರನ ಜವಾಬ್ದಾರಿಯಾಗಿದೆ. ಈ ಚುನಾವಣೆಗೆ 80 ವರ್ಷ ಮೇಲ್ಪಟ್ಟವರಿಂದ ಮತ್ತು ಅಂಗವಿಕಲರಿAದ ಮತದಾನಕ್ಕೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇದರಿಂದಲೂ ಮತದಾನದ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಅಭಿಯಾನ ಕುರಿತಾದ ಭಿತ್ತಿ ಪತ್ರವನ್ನು ಈ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಲು ಅರ್ಹರಾದ 10 ಯುವ ಮತದಾರರಿಂದ ಬಿಡುಗಡೆ ಮಾಡಿಸಲಾಯಿತು.ಹಾವೇರಿ ಗುರುಪಾದದೇವರ ಮಠದ ಶಿವಯೋಗಿ ಶಿವಾಚಾರ್ಯರು, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಹಾವೇರಿ ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಪ್ರಾರ್ಥನೆ ಜರುಗಿತು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ಸ್ವಾಗತಿಸಿದರು. ನಡುವಿನಮಠದ ಶ್ರೀ ಚೌಡೇಶ್ವರಿ ಮಹಿಳಾ ಮಂಡಳದ ಸದಸ್ಯರಿಂದ ಪ್ರಾರ್ಥನೆ ನಡೆಯಿತು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.