ಕಾಯಕದಲ್ಲೇ ಕೈಲಾಸ :ಮಾದರಿ ಈ ಮಾದೇವಿ


ಗದಗ,ಏ.10 ಮಂಗಳಮುಖಿಯೊಬ್ಬರು ಪಡ (ಗುಂಡಿ ತೋಡುವುದು) ಕಡಿಯುವ ಮೂಲಕ ಕಾಯಕ ನಿರತರಾಗಿ ಗಮನ ಸೆಳೆದಿದ್ದಾರೆ. ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಾದೇವಿ ಅಸೂಟಿ ಗಮನ ಸೆಳೆಯುತ್ತಿರುವ ಮಂಗಳಮುಖಿ. ಇವರು ಅದೆಷ್ಟೋ ಮಂಗಳಮುಖಿತರಿಗೆ ಮಾದರಿಯಾಗಿದ್ದಾರೆ.
ತನ್ನ ತೋಳು ಬಲ ಹಾಗೂ ಶ್ರಮದಿಂದ ಬದುಕುತ್ತಿರುವ ಮಾದೇವಿ ಅವರ ಈ ಕಾರ್ಯಕ್ಕೆ ಇಡೀ ಗ್ರಾಮವೇ ಸದ್ಯ ಬೆನ್ನು ತಟ್ಟುತ್ತಿದೆ.ಮಂಗಳಮುಖಿಯಾದರೂ ಗಂಡಸರನ್ನೂ ಮೀರಿಸುವಂತೆ ಪಡ ಹಾಕುವುದನ್ನು ನೋಡಿ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.
ಅಬ್ಬಿಗೇರಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ನರೇಗಾ ಯೋಜನೆಯ ಬದುವು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ಮಾದೇವಿ ಅವರ ಪ್ರಾಮಾಣಿಕ ಕೆಲಸ ನಿರ್ವಹಣೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಬದುವು ನಿರ್ಮಾಣ ಕಾಮಗಾರಿಯಲ್ಲಿ ಫಿಕಾಸಿ ಹಿಡಿದು ನೆಲ ಅಗಿಯುವುದು, ಮಣ್ಣು ಹೊರುವುದು ಸೇರಿದಂತೆ ನರೇಗಾದಲ್ಲಿ ಓರ್ವ ಗಂಡಾಳು ಏನು ಮಾಡುತ್ತಾನೋ ಅದನ್ನು ಅಚ್ಚುಕಟ್ಟಾ ಮಾಡುವ ಮೂಲಕ ಅಲ್ಲಿನ ಅಧಿಕಾರಿ ವರ್ಗವನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರ ಅಚ್ಚುಕಟ್ಟಾದ ಕೆಲಸ ಇತರರಿಗೂ ಮಾದರಿ ಎಂದು ನರೇಗಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಬ್ಬಿಗೇರಿ ಗ್ರಾಮ ಪಂಚಾಯತಿ ವತಿಯಿಂದ ರೈತರ ಜಮೀನುಗಳಲ್ಲಿ ಕಳೆದು ಹಲವು ದಿನಗಳಿಂದ ಬದು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಭಿಕ್ಷೆ ಬೇಡಿ ಬದುಕುವುದಕ್ಕಿಂತ ಈ ರೀತಿ ದುಡಿದು ಬದುಕು ಸಾಗಿಸುವುದರಲ್ಲಿ ನನಗೆ ಸುಖ ಇದೆ ಎನ್ನುತ್ತಾರೆ ಮಂಗಳಮುಖಿ ಮಾದೇವಿ ಅಸೂಟಿ.