
ಮೈಸೂರು: ಮಾ.13:- ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು. ಕೀಳರಿಮೆ ಇಟ್ಟುಕೊಳ್ಳಬಾರದು ಎಂದು ಸಾಲುಮರದ ತಿಮ್ಮಕ್ಕ ದತ್ತು ಪುತ್ರ ಬಳ್ಳೂರು ಉಮೇಶ್ ಹೇಳಿದರು.
ನಗರದ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಲಾಗಿದ್ದ ವಿಶ್ವ ನಲ್ಲಿ ಕೆಲಸಗಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲಸ ಮಾಡುವಾಗ ಇನ್ನೊಬ್ಬರಿಗೆ ಮಾದರಿಯಾಗಿರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಪರೋಪಕಾರಕ್ಕೆ ಬದುಕಬೇಕು. ಯಾರಿಂದಲೂ ಏನನ್ನೂ ಅಪೇಕ್ಷಿಸಬಾರದು. ಇನ್ನೊಬ್ಬರನ್ನು ಮೆಚ್ಚಿಸಲು ಕೆಲಸ ಮಾಡಬಾರದು. ಕಾಯಕದಲ್ಲಿಯೇ ಕೈಲಾಸ ಕಾಣಬೇಕು. ಶ್ರದ್ಧೆ, ಭಕ್ತಿಯಿಂದ ಮಾಡಿದ ಕಾರ್ಯಕ್ಕೆ ಎಂದಿಗೂ ಗೌರವ ಸಿಗುತ್ತದೆ ಎಂದರು.
ತಿಮ್ಮಕ್ಕ ಅವರಿಗೆ ಮಕ್ಕಳಾಗಲಿಲ್ಲ. ಇದರಿಂದ ಅವರು ಕುಗ್ಗದೆ ಸಸಿಗಳೇ ನನ್ನ ಮಕ್ಕಳು ಎಂದು ಬೆಳೆಸಿದರು. ಈಗ ಮರಗಳು ನೆರಳು ಕೊಡುತ್ತೇವೆ. ತಿಮ್ಮಕ್ಕನವರ ಕೆಲಸದ ಮೇಲಿನ ಶ್ರದ್ಧೆ ಅವರಿಗೆ ಪ್ರಶಸ್ತಿ ಹಾಗೂ ಹೆಸರು ತಂದು ಕೊಟ್ಟಿದೆ ಎಂದರು.
ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸು, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್, ನಲ್ಲಿ ಕೆಲಸಗಾರರಾದ ಎಚ್.ಬಿ.ರಮೇಶ್, ಎಚ್.ಕೆಂಪೇಗೌಡ, ಎಚ್.ಕೆ.ಚಂದ್ರಪ್ಪ, ಮಹದೇವಪ್ಪ, ಕೆ.ಎಲ್.ಬಸವರಾಜು, ನಂಜುಂಡಸ್ವಾಮಿ, ಪೀರ್ ಬೇಗ್, ಸ್ವಾಮಿ, ಮಹದೇವ, ವೆಂಕಟೇಶ್, ಎಂ.ಎಸ್.ಶ್ರೀಧರ್, ಸಿ.ಮಹದೇವು ಅವರಿಗೆ ನಲ್ಲಿ ಕೆಲಸದ ನಕ್ಷತ್ರ ಬಿರುದು ನೀಡಿ ಸನ್ಮಾನಿಸಲಾಯಿತು.
ಸಂಘದ ಸದಸ್ಯರಿಗೆ ಮತ್ತು ಕುಟುಂಬದವರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ, ಕಾರ್ಮಿಕ ನಿರೀಕ್ಷಕ ರವಿ ಕುಮಾರ್, ಸಂಘದ ಅಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷ ಎಂ.ಎಸ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಪಳನಿ, ಖಜಾಂಚಿ ಎಂ.ಪ್ರಕಾಶ್, ಬಸವರಾಜ್ ಇದ್ದರು.