ಕಾಯಕದಲ್ಲಿ ಕೈಲಾಸ ಕಂಡ ಶರಣರು -ಪಿ.ರವೀಂದ್ರ ಹಿರೇಮಠ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.24: ದುಡಿಯದೇ ದುಡ್ಡು ಬರಬೇಕೆಂದು ಆಶಿಸುವ ಈ ದಿನಗಳಲ್ಲಿ ದುಃಖವೇ ಪ್ರಧಾನವಾಗಿ ಸಮಾಜವನ್ನು ಆವರಿಸಿದೆ. ಆಸೆಯೇ ದುಃಖಕ್ಕೆ ಕಾರಣವೆಂದು ಬುದ್ದ ಅಂದು ಹೇಳಿದ್ದರೆ, ಇಂದು ಪರಿಶ್ರಮ ರಹಿತ ಆದಾಯದ ಆಕಾಂಕ್ಷೆಯೇ ದುಃಖಕ್ಕೆ ಮೂಲ ಎಂದು ಕನ್ನಡ ಉಪನ್ಯಾಸಕರಾದ ಪಿ.ರವೀಂದ್ರ ಹಿರೇಮಠರು ನುಡಿದರು.
ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯ ಅಮರ್ ಏಜೆನ್ಸೀಸ್ ಮಳಿಗೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 284ನೇ ಮಹಾಮನೆ ಲಿಂ|| ಶ್ರೀಮತಿ ಕಮಲಮ್ಮ ಡಾ|| ಬಸವನಗೌಡ ದತ್ತಿ ಮತ್ತು ಲಿಂ|| ಡಾ|| ಜೆ.ಎಂ.ವೀರಭದ್ರಪ್ಪ  ಸರ್ವಮಂಗಳಮ್ಮ ದತ್ತಿ, ಕಾಯಕ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಕಾಯಕದಲ್ಲಿ ಕೈಲಾಸ ಕಂಡ ಶರಣರು ಎಂಬ ವಿಷಯ ಕುರಿತು ಮಾತನಾಡುತ್ತಾ, 12ನೇ ಶತಮಾನದ ಶಿವಶರಣರು ಬಿಜ್ಜಳನ ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡಿದ್ದೇ ಕಾಯಕದಿಂದ. ಕೈಯಲ್ಲಿ ಕಾಯಕ ಹಿಡಿದ ಶರಣರು ದೇವರು, ದೇವಸ್ಥಾನ, ಪುಣ್ಯಕ್ಷೇತ್ರ, ಸ್ವರ್ಗಗಳನ್ನು ಮೀರಿದ ಕೈಲಾಸ ವನ್ನು ಕಂಡರು.ಕಾಯಕ ವ್ಯಕ್ತಿಯ ಕಾಯವನ್ನು ಪವಿತ್ರ ಗೊಳಿಸುವುದರ ಜೊತೆಗೆ ಸಮಾಜವನ್ನು ಶ್ರೀಮಂತಗೊಳಿಸುವುದು ಎಂದರು.
ಕಾಯಕ ದಿನಾಚರಣೆಯ ಅಂಗವಾಗಿ ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ಪ್ರತಿಫಲ ಬಯಸದೆ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕ (ಉದ್ಯಾನ ವನದ ಕೆಲಸಗಾರ)ರಾದ ಮಲ್ಲಯ್ಯ, ಶ್ರೀಮತಿ ಲಕ್ಷ್ಮಿ ಮಲ್ಲಯ್ಯ ಮತ್ತು ಕುವೆಂಪು ನಗರದ ಜೈನ್ ಪಬ್ಲಿಕ್ ಶಾಲೆಯ ಕಾವಲುಗಾರ ಶೇಷಾವಲಿ ಯವರನ್ನು ಕಾಯಕ ಶ್ರೇಷ್ಠರು ಎಂದು ಗೌರವಿಸಿ ಸನ್ಮಾನಿಸಲಾಯಿತು. ಸೋಮಾರಿಗೆ ಸುಖವಿಲ್ಲ, ಶ್ರಮಜೀವಿಗೆ ರೋಗವಿಲ್ಲ. ಶ್ರಮರಹಿತ ಜೀವನದಿಂದಾಗಿ ಇಂದಿನ ಸಮಾಜ ರೋಗಗ್ರಸ್ಥವಾಗಿದೆ. ಇದಕ್ಕೆ ಶ್ರಮದ ದುಡಿಮೆಯೊಂದೇ ಮದ್ದು ಎಂದು ಸಮಾಜ ಸೇವಕರಾದ ಎ.ಜಯರಾಮರು ಅತಿಥಿ ನುಡಿಗಳನ್ನಾಡಿದರು.
ಬಳ್ಳಾರಿ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷರಾದ ಸಿ.ಕಿಶೋರಬಾಬು ರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಮರ್ ಏಜೆನ್ಸೀಸ್‍ನ ಮಾಲಿಕರಾದ ಮರಿಗೌಡ ಪಾಟೀಲರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೃಷಿ, ವ್ಯಾಪಾರ, ಉದ್ಯಮ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ದುಡಿಯುವ ಕೈಗಳ ಕೊರತೆಯಿಂದಾಗಿ ಸೋಲನ್ನು ಅನುಭವಿಸುವಂತಾಗಿದೆ ಎಂದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ರಾಂತ ಉಪನ್ಯಾಸಕರಾದ ವಸ್ತ್ರದ್, ಸದಾಶಿವಪ್ಪ, ಬಿಸಲಹಳ್ಳಿ ಬಸವರಾಜ, ಕಿರಣ್,  ಮಹಂತೇಶ್ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.