ಕಾಯಕಕ್ಕೆ ದೈವತ್ವದ ಸ್ಥಾನ ನೀಡಿದ ಬಸವಾದಿ ಶರಣರು

ಕಲಬುರಗಿ:ಎ.22: ಮಾಡುವ ಯಾವುದೇ ಕೆಲಸವು ಶೃದ್ಧೆ, ನಿಷ್ಠೆಯಿಂದ ಮಾಡಬೇಕು. ಅದರ ಪ್ರತಿಫಲ ತಾನೊಬ್ಬನಲ್ಲದೆ ಸಮಾಜದ ಜೊತೆ ವಿನಿಯೋಗ ಮಾಡಬೇಕು. ಆಗ ಅದರಲ್ಲಿಯೇ ದೇವರನ್ನು ಕಾಣಲು ಸಾಧ್ಯವಿದೆ ಎಂದು ‘ಕಾಯಕವೇ ಕೈಲಾಸ’ ಎಂಬ ಮೂಲಮಂತ್ರ ಸಾರಿದ ಬಸವೇಶ್ವರ ಮತ್ತು ಶರಣರು ಕಾಯಕಕ್ಕೆ ಪ್ರಥಮ ಆದ್ಯತೆಯನ್ನು ನೀಡಿ ಅದಕ್ಕೆ ದೈವತ್ವದ ಸ್ಥಾನವನ್ನು ನೀಡಿರುವುದು ಜಾಗತಿಕ ತತ್ವಗಳಿಗೆ ದೊಡ್ಡ ಕೊಡುಗೆಯಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.

    ಆಳಂದ ತಾಲೂಕಿನ ಸುಂಟನೂರ ಗ್ರಾಮದ ಶಾಂತೇಶ್ವರ ದೇವಸ್ಥಾನದ ಆವರಣದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ 890ನೇ ಬಸವ ಜಯಂತಿ ಜರುಗುತ್ತಿರುವ ಸರಣಿ ಕಾರ್ಯಕ್ರಮ-10ರಲ್ಲಿ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ವಿವಿಧ ಕಾಯಕ ಶರಣರ ಸಮಾಜದ ವ್ಯಕ್ತಿಗಳಿಗೆ ವಿಶೇಷ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಳಗದ ಅಧ್ಯಕ್ಷ, ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಬೆವರು ಹರಿಸಿ ದುಡಿಯುವ ವರ್ಗವಾದ ಕಾಯಕ ಜೀವಿಗಳೇ ದೇಶದ ಬೆನ್ನೆಲಬು. ಅವರ ಬಗ್ಗೆ ಕೀಳರಿಮೆ ಸಲ್ಲದು. ನಿಸ್ವಾರ್ಥವಾಗಿ ಹಗಲು-ರಾತ್ರಿಯೆನ್ನದೆ ಕಾಯಕದಲ್ಲಿ ತೊಡಗಿರುವ ಕಾಯಕ ಜೀವಿಗಳ ಕೊಡುಗೆ ಸಮಾಜ ಮರೆಯುವಂತಿಲ್ಲ. ಅವರಿಗೆ ಸೂಕ್ತ ಜೀವನ ಭದ್ರತೆ ದೊರಕಿಸಿ ಕೊಡಬೇಕಾದದ್ದು ಜವಬ್ದಾರಿಯುತ ಸಮಾಜದ ಆದ್ಯ ಕರ್ತವ್ಯವಾಗಿದೆ. ಮಹಾತ್ಮ ಬಸವೇಶ್ವರರು ಅನುಭವ ಮಂಟಪದ ಮೂಲಕ ಎಲ್ಲಾ ಕಾಯಕ ಶರಣರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಬಸವ ಜಯಂತಿ ಪ್ರಯುಕ್ತ ನಮ್ಮ ಬಳಗವು ವಿವಿಧ ಕಾಯಕ ಜೀವಿಗಳಿಗೆ ಗೌರವ ನೀಡಿದರೆ, ಅದು ಬಸವಾದಿ ಶರಣರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಭಾವನೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಕಾಯಕ ಶರಣರ ಸಮಾಜದ ವ್ಯಕ್ತಿಗಳಾದ ಮಲ್ಲಯ್ಯಸ್ವಾಮಿ, ಅಂಬಾರಾಯ ಹೂಗಾರ, ಬಾಬುರಾಯ ಮಡಿವಾಳ, ಮಾಳಿಂಗರಾಜ ಕಂಬಾರ, ಶ್ರೀಶೈಲ್ ದೇವಾಂಗ ಅವರಿಗೆ ವಿಶೇಷವಾಗಿ ಸತ್ಕರಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಉದಯಕುಮಾರ ಸಾಲಿಮಠ, ಶಿವಯೋಗಪ್ಪ ಬಿರಾದಾರ, ಕೇದರನಾಥ ಕುಲಕರ್ಣಿ, ಸಂಗಯ್ಯ ಮಠಪತಿ, ಮಹಾಲಿಂಗಯ್ಯ ಎಸ್.ಸ್ಥಾವರಮಠ, ಚಂದ್ರಕಾಂತ ಪಟ್ಟಣ, ಮಲ್ಲಿನಾಥ ಹೂಗಾರ, ಶರಣಮ್ಮ ಮಠಪತಿ, ಬಸವರಾಜ ಬಿ.ಪಟ್ಟಣ, ವಿವೇಕ ಮಠಪತಿ, ಅಣವೀರಯ್ಯ ಮಠಪತಿ, ರವಿಕುಮಾರ ಮಠಪತಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.