ಕಾಮ್ರೆಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವ ಆಚರಣೆ

ರಾಯಚೂರು. ಆ.೦೫-ಇಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಕಾರ್ಮಿಕ ವರ್ಗದ ಮಹಾನ್ ನಾಯಕ ಹಾಗೂ ಎಸ್‌ಯುಸಿಐ (ಸಿ) ಸಂಸ್ಥಾಪಕರಾದಂತಹ ಕಾಮ್ರೇಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ ಎನ್ ಎಸ್ ವೀರೇಶ್ ರವರು ಕಾಮ್ರೇಡ್ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ನಂತರ ಮಾತನಾಡಿದ ಅವರು ಈ ವರ್ಷ ಆಗಸ್ಟ್ ೫ರಿಂದ ಕಾ.ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವ ಆರಂಭವಾಗುತ್ತಿರುವುದು ಸ್ಫೂರ್ತಿದಾಯಕ ವಿಷಯ. ಅವರು ಅಪ್ರತಿಮ ಮಾರ್ಕ್ಸ್ ವಾದಿ ಚಿಂತಕರು, ತತ್ವಜ್ಞಾನಿಗಳು ಮತ್ತು ಭಾರತ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥಕ್ಕೆ ಸೇರಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದಾರೆ.
೧೯೪೭ರಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರವಾದರೂ ಸಹ ಶೋಷಣೆಯಿಂದ ಮುಕ್ತವಾಗಲಿಲ್ಲ ಎಂಬುದನ್ನು ಅವರು ತೋರಿಸಿಕೊಟ್ಟರು. ವಾಸ್ತವವಾಗಿ ಸ್ವಾತಂತ್ರ್ಯದೊಂದಿಗೆ ಶೋಷಕ ಬ್ರಿಟಿಷ್ ಆಳ್ವಿಕೆಯ ಜಾಗದಲ್ಲಿ ಶೋಷಕ ಬಂಡವಾಳಶಾಹಿ ವರ್ಗದ ಆಳ್ವಿಕೆ ಸ್ಥಾಪಿತವಾಯಿತು. ಆದ್ದರಿಂದ ಶೋಷಣೆಯಿಂದ ಸ್ವಾತಂತ್ರ್ಯ ದೊರಕಲಿಲ್ಲ. ಇದನ್ನು ಸಾಧಿಸಬೇಕೆಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು ಸಮಾಜವಾದವನ್ನು ಸ್ಥಾಪಿಸಬೇಕು.
ಒಂದು ನೈಜ ಮಾರ್ಕ್ಸ್ ವಾದಿ, ಲೆನಿನ್ ವಾದಿ ಪಕ್ಷದ ಅವಶ್ಯಕತೆಯನ್ನು ಮನಗಂಡು ಅವರು ಪ್ರಚಂಡ ಸಂಕಲ್ಪ, ನಿದರ್ಶನೀಯ ಕೆಚ್ಚು ಮತ್ತು ಕ್ರಾಂತಿಕಾರಿ ದಾರ್ಷ್ಟ್ಯದೊಂದಿಗೆ ಮುನ್ನಡೆದು ಕೆಲವೇ ಸಹಯೋಧರೊಂದಿಗೆ ನಮ್ಮ ದೇಶದಲ್ಲಿ ನೈಜ ಮಾರ್ಕ್ ವಾದಿ ಪಕ್ಷವನ್ನು ಕಟ್ಟಲು ಸಾಹಸಕ್ಕೆ ಕೈ ಹಾಕಿದರು, ಅನೇಕ ಸಂಕಷ್ಟಗಳು ಎದುರಾದರೂ ಸಹ ದಾರಿಯಿಂದ ಒಂದಿಂಚೂ ಹಿಂದೆ ಸರಿಯಲಿಲ್ಲ.
ನಾನು ಹಸಿವೆಯಿಂದ ರಸ್ತೆಯಲ್ಲಿ ಬಿದ್ದು ಸತ್ತರೂ ಸರಿ, ಘನತೆಯಿಂದ ಸಾಯುತ್ತೇನೆ, ನಾನು ಸೋಲಬಹುದು, ಆದರೆ ನನ್ನ ಆತ್ಮಸಾಕ್ಷಿಯನ್ನು ಮಾರಿಕೊಳ್ಳಲಾರೆ ? ಎಂದವರು ಹೇಳಿದ್ದರು. ಅಂತಹ ದೃಢ ನಿಶ್ಚಯದಿಂದ ಒಂದು ಕ್ರಾಂತಿಕಾರಿ ಪಕ್ಷವನ್ನು ನಡೆಸುವ ಹೋರಾಟ ಮತ್ತು ಸರಿಯಾದ ಕ್ರಾಂತಿಕಾರಿ ಸಿದ್ಧಾಂತದಿಂದ ಮಾರ್ಗದರ್ಶನ ಪಡೆದು ಅವಿರತ ಹೋರಾಟ ನಡೆಸಿದರು ಎಂದರು.
ಕಾಮ್ರೇಡ್ ಶಿವದಾಸ್ ಘೋಷ್ ರವರ ಜನ್ಮ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ನಾವೆಲ್ಲರೂ ಉನ್ನತ ನೀತಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಮ್ಮ ಸಂಘಟನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು, ಪಕ್ಷ ಹಾಗೂ ಕ್ರಾಂತಿಗೆ ಇನ್ನೂ ಹೆಚ್ಚು ಸಮರ್ಪಿಸಿಕೊಳ್ಳಲು ಕರೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಚನ್ನಬಸವ ಜಾನೇಕಲ್, ಜಿಲ್ಲಾ ಸಮಿತಿ ಸದಸ್ಯರಾದ ಮಹೇಶ್ ಚಿಕಲ ಪರ್ವಿ, ಮಲ್ಲಣ್ಣಗೌಡ,ಸರೋಜಾ, ಹಯ್ಯಾಳಪ್ಪ ,ವಿನೋದ್, ಕಾರ್ತಿಕ್, ಪೀರ್ ಸಾಬ್, ಹೇಮಂತ್, ಬಸವರಾಜ್ ಭಾಗವಹಿಸಿದರು.