ಕಾಮನ್‌ವೆಲ್ತ್ ಕ್ರೀಡೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ

ಬರ್ಮಿಂಗ್‌ಹ್ಯಾಂ,ಆ.೧- ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಇಂದು ೭೩ ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಅಚಿಂತ್ಯಶಿಯುಲಿ ೩೧೩ ಕೆಜಿ ಭಾರ ಎತ್ತುವ ಮೂಲಕ ಸ್ವರ್ಣಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಇದರೊಂದಿಗೆ ಈ ಅಭೂತಪೂರ್ವ ಗೆಲುವಿನೊಂದಿಗೆ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೩ ಚಿನ್ನ, ೨ ಬೆಳ್ಳಿ ಹಾಗೂ ೧ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲಿಟ್‌ಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.
ಶಿವಲಿ ಅವರಿಗೆ ಮಲೇಶಿಯಾದ ಎರ್ರಿ ಇದಾಯತ್ ಮೊಹ್ಮದ್ ಅವರು ತೀವ್ರ ಪೈಪೋಟಿ ನೀಡಿದರಾದರೂ ಮೊದಲ ಸ್ಥಾನ ಗಳಿಸುವಲ್ಲಿ ವಿಫಲರಾದರು. ಶಿಯುಲಿ ಅವರು (೧೪೩+೧೭೦ ಕೆಜಿ) ಭಾರ ಎತ್ತುವ ಮೂಲಕ ಭಾರತಕ್ಕೆ ಬಂಗಾರದ ಮಾಲೆ ತೊಡಿಸಿದರು. ಇದಾಯತ್ ಅವರು ೩೦೩ ಕೆಜಿ (೧೩೮+೧೬೫ ಕೆಜಿ) ಭಾರ ಎತ್ತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮತ್ತೊಂದೆಡೆ ಕೆನಡಾದ ಶಾದ್‌ಡಾರ್‍ಸಿಗ್‌ಮಿ ೨೯೮ ಕೆಜಿ (೧೩೫+೧೬೩ ಕೆಜಿ) ಎತ್ತುವ ಮೂಲಕ ೩ನೇ ಸ್ಥಾನ ಪಡೆದುಕೊಂಡರು.
ಶಿಯುಲಿ ಅವರು ಪಶ್ಚಿಮ ಬಂಗಾಳದ ಧೋಲ್‌ಪುರ್‌ನ ನಿವಾಸಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಚೊಚ್ಚಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ್ದಾರೆ.

ರಾಷ್ಟ್ರಪತಿ ಮುರ್ಮು, ಮೋದಿ ಅಭಿನಂದನೆ
ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅಚಿಂತಾಶಿಯುಲಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನಗಳಿಸಿರುವುದು ಸಂತಸ ತಂದಿದೆ ಎಂದು ಬಣ್ಣಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡಿರುವ ಶಿಯುಲಿ ಅವರ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಕೂಟದಲ್ಲಿ ಯುವಪ್ರತಿಭೆಗಳು ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.