ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಇಲ್ಲ


ಹುಬ್ಬಳ್ಳಿ,ಮಾ.9: ಸಾಕಷ್ಟು ಕುತೂಹಲ ಕೆರಳಿಸಿದ್ದ ಇಲ್ಲಿನ ರಾಣಿಚನ್ನಮ್ಮ ಮೈದಾನದಲ್ಲಿ (ಈದ್ಗಾ ಇರುವ ಸ್ಥಳ) ಹೋಳಿಹುಣ್ಣಿಮೆ ಪ್ರಯುಕ್ತ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿಲ್ಲ.
ಇಂದಿಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು, ಪೊಲೀಸ್ ಆಯುಕ್ತರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಆಯುಕ್ತರಾದ ಡಾ. ಬಿ. ಗೋಪಾಲಕೃಷ್ಣ ಈ ವಿಷಯ ಪ್ರಕಟಿಸಿದರು.
ಇದೇ ದಿ. 12 ರಂದು ಮಹಾನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸುವ ನಿಟ್ಟಿನಲ್ಲಿ, ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಾಗದು ಎಂದು ಅವರು ತಿಳಿಸಿದರು.
ನಗರದ ಈದ್ಗಾ ಮೈದಾನ ಪಾಲಿಕೆಯ ಜಾಗವಾಗಿರುವುದರಿಂದ ಅನುಮತಿ ಕೊಡುವುದು, ಬಿಡುವುದು ಪಾಲಿಕೆಗೆ ಸಂಬಂಧಿಸಿದ ವಿಷಯ.
ಇದಕ್ಕೆ ಕಾರ್ಯ ನಿರ್ವಾಹಕರು ಆಯುಕ್ತರೇ ಆಗಿರುತ್ತಾರೆ. ಅನುಮತಿ ನೀಡುವ ಮುನ್ನ ಯೋಚಿಸಬೇಕಾಗುತ್ತದೆ. ಕಾಮಣ್ಣನ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅರ್ಜಿ ಸಲ್ಲಿಸಿದ್ದ ಮಹಾ ಮಂಡಳದವರ ಜೊತೆ ಚರ್ಚಿಸಿ ಮನವಿಗೆ ಹಿಂಬರಹ ನೀಡಿ ಮನವೊಲಿಸಲಾಗುವದು ಎಂದು ತಿಳಿಸಿದರು.
ಶಾಂತಿ ಕದಡುವ ಸಾಧ್ಯತೆ:
ಪೊಲೀಸ್ ಆಯುಕ್ತಾದ ರಮಣ್ ಗುಪ್ತಾ ಮಾತನಾಡಿ, ಇಲ್ಲಿ ಕಾಮಣ್ಣನ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೆ ಶಾಂತಿ ಕದಡುವ ಸಾಧ್ಯತೆ ಇದೆ ಎಂದು ಗುಪ್ತ ದಳದ ಮಾಹಿತಿ ಇದೆ ಎಂದು ಹೇಳಿದರು.
ಸಧ್ಯ ಹೋಳಿ ಹುಣ್ಣಿಮೆ ಮುಗಿದಿರುವುದರಿಂದ ಹಾಗೂ ದಿ. 12 ಕ್ಕೆ ಪ್ರಧಾನಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಗತ್ಯ ಬಂದೋಬಸ್ತ್ ಕಲ್ಪಿಸಬೇಕಾಗಿರುವುದರಿಂದ ಕಾಮಣ್ಣನ ಪ್ರತಿಷ್ಠಾಪನೆ ಕುರಿತಾದ ಮನವಿಯನ್ನು ಪುರಸ್ಕರಿಸಲು ಆಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಈಗಾಗಲೇ ಹು-ಧಾ ಕಮಿಷ್ನರೇಟ್ ವ್ಯಾಪ್ತಿಯಲ್ಲಿ 462 ಕಾಮಣ್ಣನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ಹೋಳಿ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ರಾಣಿ ಚನ್ನಮ್ಮ ಗಜಾನನ ಉತ್ಸವ ಮಂಡಳಿ ಪಾಲಿಕೆ ಮೇಯರ್ ಅವರಿಗೆ ಮನವಿ ಸಲ್ಲಿಸಿತ್ತು.
ಪಾಲಿಕೆ ಮೇಯರ್ ಅವರು ಪಾಲಿಕೆ ಸಭಾನಾಯಕರು, ವಿರೋಧ ಪಕ್ಷದ ನಾಯಕರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಹಿರಿಯ ಸದಸ್ಯರೊಂದಿಗೆ ಚರ್ಚಿಸಿದ ನಂತರ ಹೆಚ್ಚಿನ ಸದಸ್ಯರು ಅನುಮತಿ ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಕೆಲ ಕಡ್ಡಾಯ ಷರತ್ತು ವಿಧಿಸಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡುವಂತೆ ಆಯುಕ್ತರಿಗೆ ಸೂಚಿಸಿದ್ದರು. ಆದರೆ ಪಾಲಿಕೆ ವಿರೋಧ ಪಕ್ಷದ ನಾಯಕರಾದ ದೊರಾಜ್ ಮನ್ನಿಕುಂಟ್ಲಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈ ಸಂಬಂಧ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಇನ್ನಿತರ ಅಧಿಕಾರಿಗಳು ಇಂದು ಸಭೆ ನಡೆಸಿದ ನಂತರ ಅಂತಿಮ ನಿರ್ಣಯವನ್ನು ಕೈಗೊಂಡರು.
ಈ ಹಿಂದೆ ಗಣೇಶೋತ್ಸವ ಹಾಗೂ ಟಿಪ್ಪು ಸುಲ್ತಾನ್ ಜಯಂತಿಗೂ ಇಲ್ಲಿ ಅನುಮತಿ ನೀಡಲಾಗಿತ್ತು. ಈ ಕುರಿತು ಸಹ ಪರ ಹಾಗೂ ವಿರೋಧ ಚರ್ಚೆಗಳು ನಡೆದಿದ್ದವು.