ತಿಪಟೂರು, ಏ. ೧- ಪ್ರವಾಸೋದ್ಯಮ ಇಲಾಖೆ ವತಿಯಿಂದ ೨೦೦.೦೦ ಲಕ್ಷ ರೂ.ಗಳಲ್ಲಿ ತಿಪಟೂರು ಅಮಾನಿಕೆರೆಯನ್ನು ಸುಂದರೀಕರಣಗೊಳಿಸುವುದಾಗಿ ಪ್ರವಾಸಿ ತಾಣ ಅಭಿವೃದ್ಧಿಪಡಿಸಿರುವ ಕಾಮಗಾರಿಯ ಉದ್ಘಾಟನಾ ಕಾರ್ಯಕ್ರಮ ತಿಪಟೂರಿನ ಅಮಾನಿ ಕೆರೆ ಆವರಣದಲ್ಲಿ ನಡೆದಿದೆ.

ತಿಪಟೂರು ನಗರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸುತ್ತಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಾಮಗಾರಿಯು ಮುಗಿಯದೆ ಇದ್ದರೂ ಉದ್ಘಾಟನೆ ಮಾಡಿ ಕಲ್ಲಿನಲ್ಲಿ ತಮ್ಮ ಹೆಸರನ್ನು ಕೆತ್ತಿಸಲಾಗಿದೆ.
ನಗರದ ಪುರಾತನ ಅಮಾನಿಕೆರೆ ಅಭಿವೃದ್ಧಿಯ ಕಾಮಗಾರಿ ದಶಕಗಳಿಂದ ಕುಂಠಿತವಾಗಿ ನಡೆಯುತ್ತಲೇ ಬಂದಿದ್ದು, ಇದೀಗ ವಿಧಾನಸಭಾ ಚುನಾವಣೆ ಘೋಷಣೆಗೆ ಎರಡು-ಮೂರು ದಿನ ಮುನ್ನವೇ ಕಾಮಗಾರಿಯು ಚುರುಕುಗೊಂಡಿತ್ತು.
ಕೆರೆಯ ಅಂಗಳದಲ್ಲಿ ಉದ್ಯಾನವನ, ಪ್ರಾರ್ಥನಾ ಮಂದಿರ, ಮಕ್ಕಳ ಆಟಿಕೆಗಳ ವಸ್ತು, ಜಿಮ್ ವಸ್ತುಗಳು, ವಿಶ್ರಾಂತಿ ಕಟ್ಟಡ, ವೀಕ್ಷಣ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಅಮಾನಿಕೆರೆಯಲ್ಲಿ ಕಟ್ಟಡಗಳಿಗೆ ಪ್ಲಾಸ್ಟಿಂಗ್, ನೀರಿನ ಪೈಪುಗಳ ಅಳವಡಿಕೆ, ಕಾರಂಜಿ, ಪಾದಚಾರಿಗಳ ರಸ್ತೆ, ವಿದ್ಯುತ್ ವ್ಯವಸ್ಥೆ ಮತ್ತು ಕೆರೆಯಲ್ಲಿ ನೀರಿನಲ್ಲಿ ಬೆಳೆದಿರುವ ಜಂಡು ತೆರವು ಕಾರ್ಯ ಹೀಗೆ ಇನ್ನು ಹಲವಾರು ಕಾಮಗಾರಿಗಳು ಬಾಕಿ ಇದ್ದ ಹಾಗೆಯೇ ನಮ್ಮ ಅಧಿಕಾರಾವಧಿಯಲ್ಲಿ ಉದ್ಘಾಟನೆ ಆಗಬೇಕೆಂಬ ಕೆಲ ಜನ ನಾಯಕರುಗಳು ತಿಪಟೂರು ಅಮಾನಿಕೆರೆಯ ಉದ್ಯಾನವನವನ್ನು ಉದ್ಘಾಟನೆ ಮಾಡಿದ್ದಾರೆ. ಇನ್ನು ಹಲವಾರು ಕಾಮಗಾರಿಗಳು ಬಾಕಿ ಇದ್ದ ಹಾಗೆಯೇ ಇಷ್ಟು ಬೇಗ ಉದ್ಘಾಟನೆ ಮಾಡಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.