ಕಾಮಗಾರಿ ಸ್ಥಳದಲ್ಲಿ ಕ್ರೀಡೆಗಳು


ರೋಣ,ಏ.10: ಗದಗ ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳ ಮೊದಲ ದಿನದಿಂದಲೇ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನರೇಗಾ ಕಾಮಗಾರಿ ಆರಂಭವಾಗಿವೆ. ಈ ಹಿನ್ನೆಲೆ ರೋಣ ತಾಲೂಕಿನಲ್ಲಿ ಪ್ರತಿ ದಿನ 16 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಜಲ ಜೀವಿನಿ ಕಾರ್ಯಕ್ರಮದಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದಾರೆ.
ಹೆಚ್ಚು ಮಾನವ ದಿನಗಳ ಸೃಜನೆ ಮಾಡಲು ಹಾಗೂ ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸದಲ್ಲಿ ತೊಡಗಿಸಲು ರೋಣ ತಾಲೂಕ ಪಂಚಾಯತಿ ವಿಭಿನ್ನ ಹಾಗೂ ವಿಶಿಷ್ಠ ನಡೆ ಅನುಸರಿಸಿದೆ. ಇದು ಜಿಲ್ಲೆಯ ಅಧಿಕಾರಿ ವರ್ಗ ಬೆರಗಾಗುವಂತೆ ಮಾಡಿದೆ. ಹೇಗೆಂದರೆ, ಕೆಲಸ ಮುಗಿದ ಬಳಿಕ ಬಹುತೇಕ ಪ್ರದೇಶದ ಕೂಲಿಕಾರರು ಮನೆಯತ್ತ ತೆರಳುವುದು ವಾಡಿಕೆ ಆದರೆ, ಅಬ್ಬಿಗೇರಿ ಹಾಗೂ ಸವಡಿ ಗ್ರಾಮದವರು ಗ್ರಾಮೀಣ ಕ್ರೀಡೆ, ಸೋಬಾನ ಪದಗಳ ಮೂಲಕ ತಮ್ಮ ದಣಿವು ನಿಗಿಸಿಕೊಳ್ಳುತ್ತಾರೆ.
ಆಶ್ಚರ್ಯ ಎನಿಸಿದರು ಇದು ಸತ್ಯ. ವಿಭಿನ್ನ ಚಟುವಟಿಕೆ ಮೂಲಕ ಗಮನ ಸೆಳೆದಿರುವುದು ಇದೇ ಮೊದಲು. ಸವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿದಿನ 2 ಸಾವಿರಕ್ಕೂ ಅಧಿಕ ಜನ ಕೆಲಸಕ್ಕೆ ಬಂದರೆ. ಅಬ್ಬಿಗೇರಿ ಗ್ರಾಮ ಪಂಚಾಯತಿಯಲ್ಲಿ 3700 ಕ್ಕೂ ಅಧಿಕ ಜನ ಕೂಲಿ ಕಾರ್ಮಿಕರು ಕೆಲಸದಲ್ಲಿ ಪ್ರತಿದಿನ ತೊಡಗಿಕೊಳ್ಳುತ್ತಿದ್ದಾರೆ. ನರೇಗಾ ಕಾಮಗಾರಿಗೆ ಇನ್ನು ಹೆಚ್ಚು ಜನರನ್ನು ತಾಲೂಕಿನ ಇತರ ಪಂಚಾಯತ ವ್ಯಾಪ್ತಿಯಲ್ಲಿ ಸೆಳೆಯಲು ಮತ್ತು ನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರು ಪುರುಷರಷ್ಟೇ ಸಮಾನರು ಎಂಬುದನ್ನು ಇದು ಸಾರಲು ಸಹಕಾರಿಯಾಗಿದೆ.

ಸಮಾನ ಕೆಲಸ ಸಮಾನ ಕೂಲಿ ಎಂಬ ತತ್ವ ಸಾರಲು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಬ್ಬಿಗೇರಿ ಪಿಡಿಓ ವಿಭಿನ್ನ ಪ್ರಯತ್ನ ಗಮನಸೆಳದಿದೆ.

ಈ ಪ್ರಕ್ರಿಯೆಯಲ್ಲಿ ನರೇಗಾ ಕೂಲಿಗೆ ಬರುವ ಮಹಿಳೆಯರು ಎಲ್ಲರೊಂದಿಗೆ ಬೆರೆತು ಖೋ-ಖೋ ಆಟವಾಡಿ ಸಂತಸ ಪಟ್ಟರೇ, ಕೆಲವರು ಸೋಬಾನೆ ಪದಗಳನ್ನು ಸಹ ಮಹಿಳೆಯರು ಸಾಮೂಹಿಕವಾಗಿ ಹಾಡಿರುವುದು ನರೇಗಾ ಕಾಮಗಾರಿಯ ಸ್ಥಳದಲ್ಲಿ ಮೆರುಗನ್ನು ಹೆಚ್ಚುವಂತೆ ಮಾಡಿದೆ. ಕಾರ್ಮಿಕರಿಗೆ ಕೆಲಸದಲ್ಲಾಗುವ ದಣಿವು ನಿವಾರಿಸಿಕೊಳ್ಳಲು ಹಾಗೂ ಉಲ್ಲಸಿತರಾಗಿ ಮತ್ತೆ ಕೆಲಸಕ್ಕೆ ಬರಲು ಇದು ಪ್ರೇರಣೆಯಾಗಲಿದೆ ಎಂಬುದು ಕೆಲ ಮಹಿಳೆಯರ ಅಭಿಪ್ರಾಯವಾಗಿದೆ.

ಪುರಷರು ಕಬಡ್ಡಿ: ಮಹಿಳೆಯರು ಖೋ-ಖೋ ಆಟದಲ್ಲಿ ತೊಡಗಿದರೆ. ಇತ್ತ ಪುರುಷರು ಕಬ್ಬಡ್ಡಿ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಇದರಿಂದ ವಿಶಿಷ್ಠ ವಾತಾವರಣ ನಿರ್ಮಾಣವಾಗಿದ್ದು. ಜನರು ಉದ್ಯೋಗ ಖಾತ್ರಿ ಕೆಲಸದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡಿದೆ.
`ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ’ ಎಂಬ ಉಕ್ತಿಯಂತೆ ಉದ್ಯೋಗ ಖಾತ್ರಿ ಸ್ಥಳ ಸಮಾನತೆಯ ತತ್ವವನ್ನು ಸಾರುತ್ತಿದೆ. ಅಲ್ಲದೆ ಗ್ರಾಮೀಣ ಜನರಲ್ಲಿ ಕೆಲಸದ ಬಗ್ಗೆ ಹೆಮ್ಮೆ, ವಿಶ್ವಾಸ ಇಮ್ಮಡಿಗೊಳಿಸಿದೆ.