ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಶಾಸಕ ದದ್ದಲ್

ರಾಯಚೂರು, ಮೇ.೩೦- ರಾಯಚೂರು ಗ್ರಾಮೀಣ ಶಾಸಕರ ಕಛೇರಿಯಲ್ಲಿ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಶಾಸಕ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಲಧಾರೆ ಯೋಜನೆಗೆ ಈ ಹಿಂದಿನ ಸರ್ಕಾರವು ೧೦೦೦ ಕೋಟಿ ಅನುಧಾನ ನೀಡಿತ್ತು ಜತೆಗೆ ಈಗಿನ ಸರ್ಕಾರವು ಹೆಚ್ಚುವರಿ ೯೦೦ ಕೋಟಿಗಳ ಅನುದಾನ ನೀಡಿದ್ದು, ಒಟ್ಟು ೧೯೦೦ ಕೋಟಿ ಅನುಧಾನ ಜಲದಾರೆ ಯೋಜನೆಗೆ ಅನುಮೋದಿಸಿದೆ. ಹೀಗಾಗಿ ಕೂಡಲೇ ಯೋಜನೆಯ ಅನುಷ್ಠಾನ ಕೈಗೆತ್ತಿಕೊಳ್ಳಬೇಕೆಂದು ಸೂಚಿಸಿದರು.
ಮಳೆಗಾಲ ಪ್ರಾರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುವ ಕಾರಣ ಸಾರ್ವಜನಿಕರು, ರೈತರು ರಸ್ತೆಗಳಲ್ಲಿ ಸಂಚರಿಸಲು ತೊಂದರೆ ಆಗದಂತೆ ರಸ್ತೆಗಳ ದುರಸ್ಥಿ ಮತ್ತು ನಿರ್ವಹಣೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೨೦೦ ಕಿ.ಮಿ ಗ್ರಾಮೀಣ ರಸ್ತೆಗಳನ್ನು ಕಳೆದ ವರ್ಷ ಮೇಲ್ದರ್ಜೆಗೆರಿಸಲಾಗಿದ್ದು, ರಸ್ತೆಗಳನ್ನು ಲೋಕೋಪಯೊಗಿ ಇಲಾಖೆಗೆ ಶೀಘ್ರ ಹಸ್ತಾಂತರಿಸಲು ಪಂಚಾಯತರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರ ಸ್ಥಳಿಯ ಅಭಿವೃದ್ಧಿ ಅನುದಾನ ಮತ್ತು ಇನ್ನಿತರ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಇ.ಇ ಗಣಪತಿ ಸಾಕ್ರೆ, ಲೋಕೋಪಯೋಗಿ ಇಲಾಖೆಯ ಇ.ಇ ಚನ್ನಬಸಪ್ಪ ಮೆಕಾಲೆ, ಎ.ಇ.ಇ ಪ್ರಕಾಶ, ಎ.ಇ.ಇ ಹಿರಾಲಾಲ್, ಮತ್ತು ಎಲ್ಲಾ ಕಿರಿಯ ಅಭಿಯಂತರರು ಉಪಸ್ಥಿತರಿದ್ದರು.