ಕಾಮಗಾರಿ ಅಪೂರ್ಣ, ಬಿಲ್ ಪೇಮೆಂಟ್ ಪೂರ್ಣಜಲಜೀವನ ಮಿಷನ್ ಹೆಸರಲ್ಲಿ ಲೂಟಿ; ಬಿ.ಆರ್ ಆರೋಪ

ಕಲಬುರಗಿ,ಮಾ 10: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಿಗೆ ಚುನಾವಣಾ ವೆಚ್ಚಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ನೇರ ಆರೋಪ ಮಾಡಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯೋಜನೆ ಹೆಸರಿನಲ್ಲಿ ಎಲ್ಲೆಂದರಲ್ಲಿ ಮನಸ್ಸಿಗೆ ಬಂದಂತೆ ಒಳ್ಳೆಯ ಗುಣಮಟ್ಟದ ರಸ್ತೆಗಳನ್ನು ಅಗೆದು ಹಾಳು ಮಾಡಲಾಗುತ್ತಿದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಹಣಕಾಸಿನ ಅನುಕೂಲ ಕಲ್ಪಿಸುವ ದುರುದ್ದೇಶದೊಂದಿಗೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಳಂದ ವಿಧಾನಸಭಾ ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಹೆಸರಲ್ಲಿ ಹೀಗೆ ಸುಧಾರಿತ ರಸ್ತೆಗಳನ್ನು ಹಾಳು ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವೈಜ್ಞಾನಿಕವಾಗಿ ಹಾಗೂ ಕಳಪೆ ಮಟ್ಟದಲ್ಲಿ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳುವ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ನಿರ್ವಾಹಕ ಅಧಿಕಾರಿಗಳು ಕೂಡಲೆ ಆಳಂದ ಕ್ಷೇತ್ರದ ಯಾವ ಯಾವ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆಯೋ ಆ ಗ್ರಾಮಗಳಿಗೆ ಅಚ್ಚರಿಯ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಬಿ.ಆರ್. ಪಾಟೀಲ್ ತಾಕೀತು ಮಾಡಿದರು.


ಅಡ್ವಾನ್ಸ್ ಬಿಲ್ ಪೇಮೆಂಟ್ !
ಆಳಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿ ಮನಸ್ಸಿಗೆ ಬಂದಂತೆ ಕಾಮಗಾರಿ ಕೈಗೊಳ್ಳುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳದೆಯೂ ಕೆಲವೆಡೆ ಬಿಲ್ ಪೇಮೆಂಟ್ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದರು.