ಕಾಮಗಾರಿಯಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಲಕ್ಷ್ಮೇಶ್ವರ,ಜು.26: ತಾಲೂಕಿನಲ್ಲಿ ಮನೆ ಮನೆಗೆ ಕುಡಿಯುವ ನೀರು ಕಲ್ಪಿಸುವ “ಜಲಜೀವನ ಮಿಷನ್” ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ನಡೆದಿದ್ದು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ತಾಲೂಕಾ ಸಂಘಟನೆ ಒತ್ತಾಯಿಸಿದೆ.
ಸೋಮವಾರ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ಸೋಮಣ್ಣ ಬೆಟಗೇರಿ ಮತ್ತು ಉಪಾಧ್ಯಕ್ಷ ಪದ್ಮರಾಜ ಪಾಟೀಲ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಕ್ಕು ಅದಿನಿಯಮ 2005 ಅನ್ವಯ ಪಡೆದ ಮಾಹಿತಿಯ ಬಗ್ಗೆ ವಿವರಣೆ ನೀಡಿದ ಅವರುಗಳು ತಾಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಗ್ರಾಮಗಳಲ್ಲಿ ಒಟ್ಟು 1,61,750 ಮೀಟರ್ ಉದ್ದದ ವಿತರಣಾ ಪೈಪನ್ನು ಅಳವಡಿಸುವ ಗುರಿ ಹೊಂದಲಾಗಿತ್ತು.
ಆದರೆ ಯಾವುದೇ ಗ್ರಾಮದಲ್ಲೂ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಕೈಗೊಂಡಿರುವ 40 ಕಾಮಗಾರಿಗಳಲ್ಲಿ ಕೇವಲ 27 ಕಾಮಗಾರಿಗಳು ಪೂರ್ಣಗೊಂಡಿದ್ದು 39 ಕಾಮಗಾರಿಗಳು ಆರಂಭಗೊಂಡಿದ್ದವು ಎಂದು ತಪ್ಪು ಮಾಹಿತಿಯನ್ನೇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಶಿರಹಟ್ಟಿ ವಿಭಾಗದವರು ನೀಡಿದ್ದಾರೆ ಎಂದು ಆರೋಪಿಸಿದರು.
ಜೆಜೆಎಂ ಯೋಜನೆಯಡಿ ಒಟ್ಟು3,079.31 ಲಕ್ಷರುಗಳ ಅಂದಾಜು ಯೋಜನೆ ವೆಚ್ಚಕ್ಕೆ2,708.38 ಲಕ್ಷ ರೂಗಳ ಅನುದಾನ ಬಿಡುಗಡೆಯಾಗಿದ್ದು ಆದರೆ ನಿರೀಕ್ಷೆಯಂತೆ ಯಾವ ಗ್ರಾಮಗಳಲ್ಲಿಯೂ ಅಂದಾಜು ಯೋಜನಾ ಪಟ್ಟಿ ಮತ್ತು ಕ್ರಿಯಾ ಯೋಜನೆಯಂತೆ ಕಾಮಗಾರಿ ನಡೆದಿಲ್ಲ ಎಂದು ಅವರು ಆರೋಪಿಸಿದರು. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪೈಪುಗಳನ್ನು ಕನಿಷ್ಠ ಮೂರರಿಂದ ಐದು ಅಡಿ ಭೂಮಿ ಆಳದಲ್ಲಿ ಅಳವಡಿಸಬೇಕು ಎಂಬ ಕಾನೂನು ಇದ್ದರು ಬೇಕಾಬಿಟ್ಟಿ ಕಾಮಗಾರಿ ಮಾಡಿ ಗುತ್ತಿಗೆದಾರರ ಹೆಸರಿನಲ್ಲಿ ಒಂದು ಪಕ್ಷದ ಕಾರ್ಯಕರ್ತರು ಕಾಮಗಾರಿ ಮಾಡಿರುವುದರಿಂದ ಅಧಿಕಾರಿಗಳು ಅಸಹಾಯಕರಾಗಿ ರಾಜಕೀಯ ಒತ್ತಡಕ್ಕೆ ಮಣಿದು ಅನೇಕ ಗ್ರಾಮಗಳಲ್ಲಿ ಪೂರ್ಣ ಕಾಮಗಾರಿ ಮುಗಿದಿದೆ ಎಂದು ಸರ್ಟಿಫಿಕೇಟ್ ನೀಡಿ ಶೇಕಡ 50ಕ್ಕೂ ಹೆಚ್ಚು ಹಣವನ್ನು ಕಾಮಗಾರಿಯಿಂದ ಪಡೆದಿದ್ದು ಎಲ್ಲಿಯೂ ಪ್ರಾಯೋಗಿಕವಾಗಿ ನಳಗಳಿಗೆ ನೀರನ್ನು ಬಿಡದೆ ಮೇಲ್ಮಟ್ಟದ ಜಲಗಾರವು ಪೂರ್ಣಗೊಳ್ಳದೆ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಅನುದಾನ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜೆಜೆ ಎಂ ಕಾಮಗಾರಿಯಲ್ಲಿ ನಡೆದಿರುವ ಅವ್ಯವಾರದ ಕುರಿತು ಜಿಲ್ಲಾಧಿಕಾರಿಗಳು ವಿಶೇಷ ತನಿಖಾ ತಂಡ ರಚಿಸಿ ಕೂಲಂಕುಶ ತನಿಖೆ ನಡೆಸಿ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರಲ್ಲದೆ 15 ದಿನಗಳೊಳಗೆ ಯಾವುದೇ ನಿರ್ಧಾರ ಪ್ರಕಟಿಸದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲನಗೌಡ್ರು ಪಾಟೀಲ, ನಿರಂಜನ ವಾಲಿ, ಅಣ್ಣಪ್ಪ ರಾಮಗಿರಿ, ರಾಘವೇಂದ್ರ ಉಮಚಗಿ, ಗಂಗಪ್ಪ ಹೂಗಾರ ಇದ್ದರು.