ಕಾಮಗಾರಿಗೆ ಭೂಮಿಪೂಜೆ

ಬ್ಯಾಡಗಿ,ಜು.20: ಮನೆ-ಮನೆಗೆ ಗಂಗೆ ಯೋಜನೆಯಡಿ (ಜಲಜೀವನ್ ಮಿಷನ್) ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ಧ ನೀರು ಪೂರೈಸುವ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು.
ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 33ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮನೆ-ಮನೆಗೆ ಗಂಗೆ ಯೋಜನೆಯ ಮೂಲಕ ಜನರಿಗೆ ಶುದ್ಧ ನೀರನ್ನು ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ. ಪ್ರತಿಯೊಂದು ಗ್ರಾಮದ ಪ್ರತಿ ಮನೆಗೂ ಶುದ್ಧ ನೀರು ದೊರಕಬೇಕು. ನೀರಿನ ಮಿತಬಳಕೆ, ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯುವುದು, ಪ್ರತಿ ಹನಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು, ನೀರು ಕಲುಷಿತಗೊಳ್ಳದಂತೆ ನಿರ್ವಹಣೆ ಮಾಡಿ ಪ್ರತಿ ವ್ಯಕ್ತಿಗೂ ಶುದ್ಧ ನೀರು ಪೂರೈಸುವ ಯೋಜನೆಯಾಗಿದೆ ಎಂದು ತಿಳಿಸಿದರು.
ಎಇಇ ಸುರೇಶ ಬೇಡರ ಮಾತನಾಡಿ, ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀಟರ್‍ನಂತೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಲಾಗಿದ್ದು, ಪ್ರತಿ ಗ್ರಾಮದ ಜನಸಂಖ್ಯೆ ಹಾಗೂ ನೀರಿನ ಪ್ರಮಾಣ ಆಧರಿಸಿ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಜನಸಂಖ್ಯೆ ಆಧರಿಸಿ ಕಡಿಮೆ ನೀರಿನ ಮೂಲಗಳಿರುವ ಗ್ರಾಮಗಳಲ್ಲಿ ಜಲಶೇಖರಣೆ ಕಾಮಗಾರಿಗಳನ್ನು ಕೈಗೊಂಡು ಹಂತ-ಹಂತವಾಗಿ ಮನೆ-ಮನೆಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ಶಂಭನಗೌಡ ಪಾಟೀಲ, ಶಿವರಾಜ ಹರಮಗಟ್ಟಿ, ಮಹದೇವಪ್ಪ ಆಲದಕಟ್ಟಿ, ಮಾಲತೇಶ ಮಳವಳ್ಳಿ, ಸಿ.ಕೆ.ವೀರನಗೌಡ್ರ, ಹನುಮಂತಪ್ಪ ಕೂಸಮ್ಮನವರ, ಶಕುಂತಲಾ, ಇಂಜನೀಯರ್ ವೈ.ಕೆ ಮಟಗಾರ, ಪಿಡಿಓ ಧರ್ಮರಾಜ ಆಡಿನ್, ಸುರೇಶ ಗುತ್ತಲ, ಗುತ್ತಿಗೆದಾರ ಟಿ.ಪಿ.ಬನ್ನಿಹಟ್ಟಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.