ಕಾಮಗಾರಿಗಳ ಹಣ ಬಿಡುಗಡೆಗೆ ಒತ್ತಾಯ

ಕೋಲಾರ,ಜು.೧೮- ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕೋಲಾರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಬಾಕಿ ಹಣವನ್ನು ಪಾವತಿಸುವ ಬಗ್ಗೆ ಸದಸ್ಯರಾದ ಗೋವಿಂದರಾಜುರವರು ಲೋಕೋಪಯೋಗಿ ಇಲಾಖಾ ಸಚಿವರ ಗಮನಸೆಳೆದರು.
ಕೋಲಾರ ಜಿಲ್ಲೆ, ಲೋಕೋಪಯೋಗಿ ಇಲಾಖಾಯಡಿಯಲ್ಲಿ ಗುತ್ತಿಗೆದಾರರು ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿ, ರಾಜ್ಯ ಹೆದ್ದಾರಿ ರಸ್ತೆ, ಸೇತುವೆಗಳು, ನ್ಯಾಯಾಧೀಶರ ಕಟ್ಟಡಗಳು ಹಾಗೂ ನಿರ್ವಹಣೆ ಮತ್ತು ದುರಸ್ತಿ ಇವುಗಳ ಕಾಮಗಾರಿಯನ್ನು ಪೂರ್ಣಗೊಳಿಸಿರುವ ಇವರುಗಳಿಗೆ, ಸರ್ಕಾರದಿಂದ ನೀಡಬೇಕಾಗಿರುವ ಬಾಕಿ ಹಣ ರೂ. ೧೧೯ ಕೋಟಿ ಹಾಗೂ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಾಕಿ ಹಣ ಸೇರಿ ಒಟ್ಟು ೨೦೦ ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಬಾಕಿ ಹಣವನ್ನು ಇದುವರೆಗೂ ನೀಡದೇ ಇರುವುದರಿಂದ ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಸಾಲ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಈ ಕೂಡಲೇ ಹಣ ಬಿಡುಗಡೆಗೆ ಆದೇಶ ನೀಡಬೇಕಾಗಿರುವ ವಿಷಯವನ್ನು ಸದಸ್ಯರು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳೆರವರ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇ-೨೦೨೩ ರ ಅಂತ್ಯಕ್ಕೆ ವಿವಿಧ ಲೆಕ್ಕಶೀರ್ಷಿಕೆಗಳಡಿ ಒಟ್ಟಾರೆ ರೂ. ೮೫೦೬.೦೦ ಕೋಟಿ ಮೊತ್ತದ ಬಿಲ್ಲುಗಳು ಪಾವತಿಗೆ ಬಾಕಿಯಿರುತ್ತವೆ. ೨೦೨೩-೨೪ ನೇ ಸಾಲಿನ ಆಯವ್ಯಯದಲ್ಲಿ ರೂ.೯೧೧೧.೨೦ ಕೋಟಿ ಅನುದಾನ ಒದಗಿಸಲಾಗಿರುತ್ತದೆ. ಸದರಿ ಅನುದಾನವನ್ನು ಇಲಾಖಾ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾಗುವ ಅಧಿಕಾರದಂತೆ ಪ್ರತಿ ಮಾಹೆ ಬಾಕಿ ಬಿಲ್ಲುಗಳನ್ನು ಆಧರಿಸಿ ವಲಯಗಳಿಗೆ ಬಿಡುಗಡೆ ಮಾಡಲಾಗುವುದು. ಈ ಅನುದಾನವನ್ನು ವಲಯಗಳು ವಿಭಾಗಗಳಿಗೆ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತದೆ. ಹಾಗೂ ಕೋಲಾರ ವಿಭಾಗದಲ್ಲಿ ಒಟ್ಟಾರೆ ರೂ. ೧೨೬.೯೫ ಕೋಟಿ ಮೊತ್ತದ ಬಿಲ್ಲುಗಚಿಳ ಬಾಕಿಯಿರುತ್ತವೆ. ಈ ಬಿಲ್ಲುಗಳನ್ನು ಪ್ರತಿ ಮಾಹೆ ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ತೀರುವಳಿ iಡಲು ಕ್ರಮವಹಿಸಲಾಗುವುದಾಗಿ ಸದಸ್ಯರಿಗೆ ಸದನದಲ್ಲಿ ಸಚಿವರು ಉತ್ತರಿಸಿದರು