ಕಾಮಗಾರಿಗಳ ನಿರ್ಮಾಣ ಮೊತ್ತದಲ್ಲಿ ಶೇ.1 ರಷ್ಟು ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಿ

ಕೋಲಾರ, ನ.೨೦: ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಕಛೇರಿ, ಉಪ ವಿಭಾಗಿಯ ಕಛೇರಿಗಳ ಅಧಿಕಾರಿಗಳು ಕಾಮಗಾರಿಗಳನ್ನು ಅನುಮೋದಿಸುವಾಗ ಕಾಮಗಾರಿ ಮೊತ್ತದ ಶೇ.೧ ರಷ್ಟುನ್ನು ಸುಂಕವನ್ನು ಸಂಗ್ರಹಿಸಿ ಕಾರ್ಮಿಕ ಕಲ್ಯಾಣ ಮಂಡಳಿಗೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ||ಸ್ನೇಹ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸುಂಕ ಸಂಗ್ರಹಣಾ ಅಭಿಯಾನದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸುಂಕ ಸಂಗ್ರಹಣಾಧಿಕಾರಿಗಳ ಕಾರ್ಯಗಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸುಂಕ ಸಂಗ್ರಹಣಾ ಅಭಿಯಾನದಡಿ ಶೇ.೧ ರಷ್ಟು ಕಠಾವು ಮಾಡಿ ಸಂಗ್ರಹಿಸಿದ ಸುಂಕದ ಮೊತ್ತವನ್ನು ನವೆಂಬರ್ ೩೦ ರೊಳಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಪಾಟೀಲ್ ಅವರು ಮಾತನಾಡಿ ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು ಇ-ಶ್ರಮ ಪೋರ್ಟಲ್ www.eshram.gov.in ಅನ್ನು ಅಭಿವೃದ್ದಿಪಡಿಸಿಲಾಗಿದೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಮಿಕರ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯದ ವಿಧ, ಕುಟುಂಬದ ವಿವರ , ಬ್ಯಾಂಕ್ ಖಾತೆ ವಿವರಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಕೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು ೧೫೬ ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು ನೋಂದಣಿಯಾಗಬಹುದು. ಇ-ಶ್ರಮ್ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ನೋಂದಣಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ ಬೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯು ಉಚಿತವಾಗಿದ್ದು ಯಶಸ್ವಿ ನೋಂದಣಿಯ ನಂತರ ಫಲಾನುಭವಿಗಳೂ ಸ್ಥಳದಲ್ಲಿಯೆ ಗುರುತಿನ ಚೀಟಿಯನ್ನು(UAN) ಪಡೆಯಬಹುದು.
ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸಂಜೀವಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ||ಜಗದೀಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪದೇವಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗಾಯಿತ್ರಿ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.