ಕಾಮಗಾರಿಗಳಿಗೆ ಶಂಕುಸ್ಥಾಪನೆ


ಬ್ಯಾಡಗಿ,ಮಾ.6: ಮನೆಮನೆಗೆ ಗಂಗೆ ಯೋಜನೆಯಡಿ ಗ್ರಾಮಗಳಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪೈಪ್ ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಹಾಳು ಮಾಡದೇ ಯಂತ್ರದ ಮೂಲಕ ರಸ್ತೆ ಕೊರೆದು ಪೈಪ್ ಲೈನ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಇಂಜನೀಯರ್ ಅವರಿಗೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.
ತಾಲೂಕಿನ ಹಳೇಶಿಡೇನೂರ ಹಾಗೂ ಹೊಸಶಿಡೇನೂರ ಗ್ರಾಮಗಳಲ್ಲಿ ರವಿವಾರ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮನೆಮನೆಗೆ ಗಂಗೆ ಯೋಜನೆಯಡಿ 3.81ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸುವಾಗ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಗುಣಮಟ್ಟದಲ್ಲಿ ಕೆಲಸವನ್ನು ಪಡೆದುಕೊಳ್ಳಬೇಕು. ಈಗಾಗಲೇ ಈ ಯೋಜನೆಯು ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಅನುಷ್ಠಾನಗೊಂಡಿವೆ. ಗ್ರಾಮಗಳಲ್ಲಿರುವ ಪ್ರತಿಯೊಬ್ಬರಿಗೂ 55 ಲೀಟರ್ ಶುದ್ದ ಕುಡಿಯುವ ನೀರನ್ನು ಈ ಯೋಜನೆಯ ಮೂಲಕ ಒದಗಿಸಲಿದ್ದು, ಎಲ್ಲರೂ ಮಿತವಾಗಿ ನೀರನ್ನು ಬಳಸಿಕೊಂಡು ಹೆಚ್ಚು ನೀರು ಪೆÇೀಲಾಗದಂತೆ ಕಾಳಜಿ ವಹಿಸಲು ಮನವಿ ಮಾಡಿದರು.
ಎಇಇ ಸುರೇಶ ಬೇಡರ ಪ್ರಾಸ್ತಾವಿಕವಾಗಿ ಮಾತನಾಡಿ, ಸದರಿ ಯೋಜನೆಯಡಿ ಹಳೇಶಿಡೇನೂರ ಗ್ರಾಮದಲ್ಲಿ 1.98.41ಲಕ್ಷ ರೂಗಳಿಗೆ ಹಾಗೂ ಹೊಸಶಿಡೇನೂರ ಗ್ರಾಮದಲ್ಲಿ 1.82.62 ಲಕ್ಷ ರೂಗಳಿಗೆ ಗುತ್ತಿಗೆ ವಹಿಸಲಾಗಿದ್ದು, ಈ ಯೋಜನೆಯಡಿ ಹೊಸ ಮೇಲ್ಮಟ್ಟದ ಜಲಾಗಾರ ನಿರ್ಮಾಣ, ಜಲಾಗಾರಗಳ ದುರಸ್ತಿ ಕಾಮಗಾರಿ ನಡೆಸಲಾಗುವುದು. ಗ್ರಾಮಗಳ ವ್ಯಾಪ್ತಿಯಲ್ಲಿ ಪೈಪಲೈನ್ ಅಳವಡಿಸಿಕೊಂಡು ಎರಡೂ ಗ್ರಾಮದಲ್ಲಿರುವ 1163 ಮನೆಗಳಿಗೂ ನಲ್ಲಿ ಸಂಪರ್ಕದ ಮೂಲಕ ನೀರು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಕೊಪ್ಪದ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ಗ್ರಾಪಂ ಸದಸ್ಯರಾದ ಈರನಗೌಡ ತೆವರಿ, ವಿನಯ ಬಿದರಿ, ಪರಮೇಶಿ ಗಜ್ಜರಿ, ರೈತ ಮುಖಂಡ ಕಿರಣ ಗಡಿಗೋಳ, ನಾಗಪ್ಪ ಓಲೇಕಾರ, ಇಂಜನೀಯರುಗಳಾದ ಕಾಶೀನಾಥ್, ಸಂಜೀವ, ಪಿಡಿಓ ಫಕ್ಕೀರೇಶಿ ಅಂಗಡಿ, ಕಾಮಗಾರಿ ನಿರೀಕ್ಷಕ ರಾಮಣ್ಣ ಗಾಜೇರ, ಗುತ್ತಿಗೆದಾರರಾದ ಶಿವಪುತ್ರಪ್ಪ ಅಗಡಿ, ರಮೇಶ ಸುತ್ತಕೋಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.