ಕಾಮಗಾರಿಗಳಿಗೆ ಚಾಲನೆ

ಗದಗ,ಜ2: ಎಸ್‍ಎಫ್ ಸಿ, 15ನೇ ಹಣಕಾಸು ಯೋಜನೆ, ಗದಗ-ಬೆಟಗೇರಿ ನಗರಸಭೆ ಅನುದಾನ (ಜನರಲ್ ಫಂಡ್)ದಲ್ಲಿ 35ನೇ ವಾರ್ಡಿನ ವಿವಿಧೆಡೆಯ ಸುಮಾರು 61 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಸೇರಿ ಒಟ್ಟು 10 ಕಾಮಗಾರಿಗಳಿಗೆ ಬಾಪೂಜಿ ನಗರ ಹಾಗೂ ಹುಡ್ಕೋ ಕಾಲನಿಯ ಈಡಬ್ಲ್ಯೂಎಸ್ ನಲ್ಲಿ ನಗರಸಭಾಧ್ಯಕ್ಷೆ ಉಷಾ ದಾಸರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, `ಕೆಲಸಗಳು ಮಾತನಾಡಬೇಕು, ಮಾತನಾಡುವುದೇ ಸಾಧನೆ ಆಗಬಾರದು’ ಎಂಬ ಧ್ಯೇಯ ವಾಕ್ಯವನ್ನು ಗಮನದಲ್ಲಿಟ್ಟುಕೊಂಡು ಗದಗ-ಬೆಟಗೇರಿ ಅವಳಿ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ 35 ವಾರ್ಡ್ ಗಳಲ್ಲೂ ಅಭಿವೃದ್ಧಿ ಕಾರ್ಯಗಳು ಪ್ರಾರಂಭಗೊಂಡಿವೆ. ವಿರೋಧ ಪಕ್ಷದವರಿಗೆ ನಾವು ಮಾಡಿ ಅಭಿವೃದ್ದಿ ಕಾರ್ಯಗಳು ಉತ್ತರ ನೀಡುತ್ತವೆ ಎಂದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ 19.47 ಕೋಟಿ ರೂ. ಅನುದಾನದಲ್ಲಿ ಸುಮಾರು 236 ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಲ್ಲಿ ಕೆಲವು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು ಪ್ರಗತಿಯಲ್ಲಿದ್ದರೆ, ಬೆರಳೆಣಿಕೆಯಷ್ಟು ಟೆಂಡರ್ ಪ್ರಕ್ರಿಯೆಯಲ್ಲಿವೆ. ಇದು ಬಿಜೆಪಿ ಅವಳಿ ನಗರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅನುದಾನದಲ್ಲಿ ಪ್ರತಿ ವಾರ್ಡ್ ಗೂ 50 ಲಕ್ಷ ರೂ. ಅನುದಾನವನ್ನು ಹಂಚಿಕೆ ಮಾಡುವ ಮೂಲಕ ಅವಳಿ ನಗರದ ಎಲ್ಲ 35 ವಾರ್ಡ್ ಗಳ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ. 34 ಕೋಟಿ ರೂ.ನಲ್ಲಿ ಸುಮಾರು 21.64 ಕೋಟಿ ರೂ. ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಉದ್ಯಾನವನ, ಸಮುದಾಯ ಭವನ, ಶೌಚಾಲಯಗಳ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದರು.
ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದಾಗ 2018-19ನೇ ಸಾಲಿನಿಂದ 14 ಮತ್ತು 15ನೇ ಹಣಕಾಸು, ಎಸ್‍ಎಫ್ಸಿ ಹೀಗೆ ಹಲವು ಯೋಜನೆಗಳ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳದೇ ಅನೇಕ ಕಾಮಗಾರಿಗಳು ಕ್ರಿಯಾ ಯೋಜನೆ ಆಗದೇ, ಟೆಂಡರ್ ಆಗದೇ, ಯಾವುದೇ ಪ್ರಗತಿ ಕಾಣದೇ ಅವಳಿ ನಗರದಲ್ಲಿ ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳ ವೇಗ ಹೆಚ್ಚಿಸಿದ್ದೇವೆ. ಸುಮಾರು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ತ್ವರಿತಗತಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವ ಕೆಲಸವನ್ನು ಮಾಡಿದ್ದೇವೆ. ಅಲ್ಲದೇ, ಅವಳಿ ನಗರದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಚಿತ್ತ ಹರಿಸಿದೆ ಎಂದು ನಗರಸಭಾಧ್ಯಕ್ಷೆ ಉಷಾ ದಾಸರ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರಾದ ಸುನಂದಾ ಬಾಕಳೆ, ನಾಮನಿರ್ದೇಶಿತ ಸದಸ್ಯರಾದ ಪ್ರಶಾಂತ್ ನಾಯ್ಕರ್, ಶಾರದಾ ಸಜ್ಜನರ, ಮುಖಂಡರಾದ ಅರವಿಂದ ಕೆಲೂರ, ಜಯಣ್ಣ ಶೆಟ್ಟರ್, ನಾಗರಾಜ ಗುರಿಕಾರ, ಪ್ರಕಾಶ್ ಕೋಟಿ, ಬಸವರಾಜ್ ಗಡ್ಡೆಪ್ಪನವರ, ಅಕ್ಕಮ್ಮ ವಸ್ತ್ರದ, ರಾಣಿ ಚಂದಾವರಿ ಸೇರಿದಂತೆ ಅನೇಕರು ಇದ್ದರು.