ಕಾಬೂಲ್ ದಾಳಿ ಹೊಣೆ ಹೊತ್ತ ಐಎಸ್

ಕಾಬೂಲ್, ಆ.೬- ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಲ್ಪಸಂಖ್ಯಾತ ಶಿಯಾ ಮುಸ್ಲಿಮರ ಮೇಲೆ ನಡೆದ ದಾಳಿಯಲ್ಲಿ ೮ ಎಂಟು ಮೃತಪಟ್ಟು, ೧೮ ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. ಸದ್ಯ ದಾಳಿ ನಡೆಸಿದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹೊತ್ತುಕೊಂಡಿದ್ದಾರೆ.
ಅಫ್ಘಾನಿಸ್ತಾನದ ಶಿಯಾ ಮುಸ್ಲಿಮರು ತಮ್ಮ ಪವಿತ್ರ ಮೊಹರಂ ತಿಂಗಳ ಮೊದಲ ೧೦ ದಿನಗಳ ಆರಾಧನೆಯಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಈ ವೇಳೆ ಕೈಗಾಡಿಗೆ ಬಾಂಬ್ ಜೋಡಿಸಿ, ದಾಳಿ ನಡೆಸಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ವಕ್ತಾರ ಖಾಲಿದ್ ಝದ್ರನ್, ಭದ್ರತಾ ತಂಡಗಳು ದುಷ್ಕರ್ಮಿಗಳ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಜನಾಂಗೀಯ ಹಜಾರಾ ಸಮುದಾಯದ ಶಿಯಾ ಮುಸ್ಲಿಮರನ್ನೇ ಸ್ಫೋಟದ ಗುರಿ ಮಾಡಲಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ದೇಶಾದ್ಯಂತ ಹಿಂಸಾತ್ಮಕ ಸಾರ್ವಜನಿಕ ದಾಳಿಗಳ ಸಂಖ್ಯೆ ಕುಸಿದಿದ್ದರೂ ಕೂಡ ಐಎಸ್ ಉಗ್ರರು ಶಿಯಾಗಳನ್ನು ಗುರಿಯಾಗಿಸುವುದನ್ನು ಮುಂದುವರೆಸಿದೆ. ಒಟ್ಟು ೩.೮೦ ಕೋಟಿ ಜನಸಂಖ್ಯೆ ಹೊಂದಿರುವ ಅಫ್ಘಾನಿಸ್ತಾನದಲ್ಲಿ ೧೦ರಿಂದ ೨೦ ಪ್ರತಿಶತ ಶಿಯಾ ಮುಸ್ಲಿಮರು ವಾಸವಾಗಿದ್ದು, ಇವರ ಮೇಲೆ ನಿರಂತರ ದಾಳಿಯಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.