ಕಾಫಿ ನಾಡಿನ ಭಕ್ತರಿಗಿಲ್ಲ ದೇವಿರಮ್ಮ ದರ್ಶನ

ಚಿಕ್ಕಮಗಳೂರು,ನ.೭- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಯ ಭಕ್ತರಿಗೆ ದೇವಿರಮ್ಮ ದರ್ಶನವನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ, ಅಷ್ಟೇ ಅಲ್ಲ ಧಾರ್ಮಿಕ ಕೇಂದ್ರವೂ ಆಗಿದೆ. ಹೀಗಾಗಿ ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆದುಕೊಂಡಿದೆ.
ಈ ಧಾರ್ಮಿಕ ಕ್ಷೇತ್ರಗಳ ಪೈಕಿ ದೇವಿರಮ್ಮ ಕೂಡ ಒಬ್ಬಳಾಗಿದ್ದು, ಪ್ರತಿವರ್ಷ ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೂ ಮುನ್ನಾ ದಿನ ೧ ಲಕ್ಷಕ್ಕೂ ಅಧಿಕ ಮಂದಿ ದೇವಿರಮ್ಮನ ಬೆಟ್ಟವೇರಿ ಭಕ್ತಿ ಸಮರ್ಪಿಸುತ್ತಿದ್ದರು. ಆದರೆ, ಕೊರೊನಾ ಸೋಂಕಿನ ಭೀತಿ ದೇವಿರಮ್ಮನಿಗೂ ತಟ್ಟಿದ್ದು, ೧ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಿದ್ದ ಬೆಟ್ಟಕ್ಕೆ ಈಗ ಜಿಲ್ಲಾಡಳಿತ ೨೦೦ ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಕೊರೊನಾ ಆತಂಕ ಇರುವ ಹಿನ್ನೆಲೆಯಲ್ಲಿ ಭಕ್ತರು ಬೆಟ್ಟಹತ್ತಿ ಬರಬಾರದೆಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಚಿಕ್ಕಮಗಳೂರಿನಿಂದ ೨೫ ಕಿ.ಮೀ ದೂರದ ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವಿರಮ್ಮನ ದೇವಾಲಯವಿದೆ. ೩ ಸಾವಿರ ಅಡಿಗೂ ಎತ್ತರವಿರುವ ದೇವಿಯನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಭಕ್ತಾದಿಗಳು ಬರಿಗಾಲಿನಲ್ಲಿ ರಾತ್ರೋರಾತ್ರಿ ಬೆಟ್ಟಹತ್ತಿ ದರ್ಶನ ಪಡೆಯುತ್ತಿದ್ದರು. ಈ ಬಾರಿ ಇದಕ್ಕೆ ಅವಕಾಶವಿಲ್ಲದಂತಾಗಿದೆ.
ದೇವಿರಮ್ಮನಿಗೆ ಐತಿಹಾಸಿಕ ಹಿನ್ನೆಲೆಯಿದ್ದು, ಮೈಸೂರಿನ ಮಹಾರಾಜರು ಮಡಿಲಕ್ಕಿ ಕಳುಹಿಸುತ್ತಿದ್ದರು. ದೀಪಾವಳಿಯ ಮೂರು ದಿನಗಳ ಕಾಲ ಈ ದೇವಾಲಯಕ್ಕೆ ೧ ಲಕ್ಷ ಜನರು ಭೇಟಿ ನೀಡುತ್ತಿದ್ದರು.
ದೇವಿಗೆ ಹರಕೆ ಕಟ್ಟಿದರೆ ಅದು ಖಂಡಿತವಾಗಿಯು ಈಡೇರುತ್ತದೆ ಎಂಬ ಭಾವನ ಭಕ್ತರಲ್ಲಿ ಮೂಡಿದೆ. ಈ ವರ್ಷ ಹರಕೆ ಕಟ್ಟಿಕೊಂಡವರು ಮುಂದಿನ ವರ್ಷ ಹರಕೆ ತೀರಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದರು.ಈ ಬಾರಿ ಭಕ್ತರಿಗೆ ನಿರ್ಬಂಧ ವಿದಿಸಲಾಗಿದೆ.