ಕಾಫಿ ಡೇ ಮಾಲೀಕ ದಿ.ಸಿದ್ದಾರ್ಥ್‌ ಪತ್ನಿ ಮಾಳವಿಕಗೆ ಬಂಧನದ ಭೀತಿ

ಬೆಂಗಳೂರು,ನ.4-ಕಳೆದ ವರ್ಷ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪುತ್ರಿ ‌ಮಾಳವಿಕಾ ಸಿದ್ಧಾರ್ಥ್‌ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳವಿಕಾ ವಿರುದ್ಧ ಕೇಸ್‌ ದಾಖಲಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಜೆಎಂಎಫ್‌ಸಿ ನ್ಯಾಯಾಲಯ ವಾರೆಂಟ್‌ ಜಾರಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಳವಿಕಾ ಅವರು ಬಂಧನದ ಭೀತಿಯಲ್ಲಿದ್ದಾರೆ.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್ ದಾಖಲಿಸಿರುವ ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ಹೊರಡಿಸಿದೆ.
ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ ಎಂಟು ಜನರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ಸಿದ್ಧಾರ್ಥ್ ಒಡೆತನದ ಎಬಿಸಿ ಸಂಸ್ಥೆಗೆ ಕಾಫಿ ಬೆಳೆಯನ್ನು ನೀಡಿದ್ದ ಸುಮಾರು 300ಕ್ಕೂ ಹೆಚ್ಚು ಬೆಳೆಗಾರರಿಗೆ ಸಂಸ್ಥೆಯು ಹಣವನ್ನು ಪಾವತಿಸಿರಲಿಲ್ಲ. 100 ಕೋಟಿಗೂ ಅಧಿಕ ಹಣವನ್ನು ಬೆಳಗೆಗಾರರಿಗೆ ನೀಡದೇ ಬಾಕಿ ಉಳಿಸಿಕೊಳ್ಳಲಾಗಿತ್ತು.ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಸಿದ್ಧಾರ್ಥ್‌ ಅವರು 2019ರ ಜುಲೈ ತಿಂಗಳಿನಲ್ಲಿ ನದಿಗೆ ಹಾರಿ ನಿಗೂಢವಾಗಿ ಮೃತಪಟ್ಟಿದ್ದರು