ಕಾಫಿನಾಡಿನಲ್ಲಿ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

ಚಿಕ್ಕಮಗಳೂರು , ಮಾ.೨೯- ಕೊರೊನಾ ಎರಡನೇ ಅಲೆಯ ಆರ್ಭಟ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೆಚ್ಚಳವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ
ಕೊರೊನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ೪೦, ಭಾನುವಾರ ೮ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕೊರೊನಾ ಸೋಂಕು ಪರೀಕ್ಷೆ ಕಡ್ಡಾಯಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ರಾಜಧಾನಿಯಿಂದ ಬರುವ ಜನರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿದೆ.
ಪರೀಕ್ಷೆ ಮಾಡಿಸಿಲ್ಲ ಎಂದರೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‌ಪೋಸ್ಟ್‌ನಲ್ಲಿ ಪರೀಕ್ಷೆಗೆ ಒಳಪಟ್ಟು ಮುಂದೆ ಸಾಗಬೇಕಿದೆ. ಕೆಲವು ಪ್ರವಾಸಿಗರು ಕೋವಿಡ್ ಟೆಸ್ಟ್‌ಗೆ ಒಳಪಡಲು ಹಿಂದೇಟು ಹಾಕುತ್ತಿದ್ದು ಅವರನ್ನು ಆರೋಗ್ಯ ಸಿಬ್ಬಂದಿ ವಾಪಾಸ್ ಕಳುಹಿಸುತ್ತಿದ್ದಾರೆ.
ಶನಿವಾರ-ಭಾನುವಾರ ವಾರಾಂತ್ಯವಾಗಿರು ವುದ ರಿಂದ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ನೂರಾರು ಪ್ರವಾಸಿಗರು ಬಂದಿದ್ದರು. ಅವರಲ್ಲಿ ಬಹುತೇಕರ ಕೋವಿಡ್ ಪರೀಕ್ಷಾ ವರದಿ ತಂದಿರಲಿಲ್ಲ. ಅವರನ್ನು ಸ್ಥಳದಲ್ಲೇ ಚೆಕ್ ಮಾಡಿ ಗಿರಿ ಪ್ರವೇಶಕ್ಕೆ ಕಳಿಸಿದ್ದಾರೆ.
ಕೊರೋನಾ ಪಾಸಿಟಿವ್ ಬಂದವರನ್ನು ವಾಪಾಸ್ ಕಳಿಸಿದ್ದಾರೆ. ಶನಿವಾರ ಸುಮಾರು ಆರು ಜನರಿಗೆ ಹಾಗೂ ಭಾನುವಾರ ಇಬ್ಬರು ಪ್ರವಾಸಿಗರಿಗೆ ಪರೀಕ್ಷೆ ವೇಳೆ ಪಾಸಿಟಿವ್ ಬಂದಿದ್ದು ಅವರನ್ನು ವಾಪಾಸ್ ಕಳಿಸಿದ್ದಾರೆ. ಕೆಲವು ಪ್ರವಾಸಿಗರು ಪರೀಕ್ಷೆಗೆ ಒಳಪಡದೆ ಆರೋಗ್ಯ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಕೈಮರ ಚೆಕ್‌ಪೋಸ್ಟ್‌ನಲ್ಲಿ ಇರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರು ಎಲ್ಲರನ್ನೂ ಪರೀಕ್ಷೆ ಮಾಡಿ ಮುಳ್ಯಯ್ಯನಗಿರಿ ಮತ್ತು ದತ್ತಪೀಠ ಭಾಗಕ್ಕೆ ಕಳಿಸುತ್ತಿದ್ದಾರೆ. ಹೊರರಾಜ್ಯದ ಪ್ರವಾಸಿಗರು ಕೋವಿಡ್ ರಿಪೋರ್ಟ್ ಕಡ್ಡಾಯವಾಗಿದೆ. ರಿಪೋರ್ಟ್ ಇಲ್ಲದೆ ಬಂದವರಿಗೂ ಟೆಸ್ಟ್ ನಡೆಯುತ್ತಿದ್ದು ನೆಗೆಟಿವ್ ಬಂದರಷ್ಟೆ ಗಿರಿ ಭಾಗಕ್ಕೆ ಪ್ರವೇಶ ನೀಡಲಾಗ್ತಿದೆ. ಕೆಲ ಪಾಸಿಟಿವ್ ಬಂದ ಪ್ರವಾಸಿಗರು ಮತ್ತೆ ಮತ್ತೆ ಚೆಕ್ ಮಾಡುವಂತೆ ಆರೋಗ್ಯ ಸಿಬ್ಬಂದಿಗಳಿಗೆ ದುಂಬಾಲು ಬೀಳುತ್ತಿದ್ದಾರೆ. ಆದರೆ, ಸ್ಥಳದಲ್ಲೇ ಇರುವ ಪೊಲೀಸರು ಪಾಸಿಟಿವ್ ಬಂದವರನ್ನು ವಾಪಾಸ್ ಕಳಿಸುತ್ತಿದ್ದಾರೆ.