ಕಾನ್​ಸ್ಟೇಬಲ್​​ ನೇಮಕಾತಿ ಪರೀಕ್ಷೆ: ನಾಲ್ವರು ನಕಲಿ ಅಭ್ಯರ್ಥಿಗಳ ಸೆರೆ

ಬೆಂಗಳೂರು,ನ.22-ಪೊಲೀಸ್ ಕಾನ್​ಸ್ಟೇಬಲ್​​ ನೇಮಕಾತಿ ಪರೀಕ್ಷೆಯನ್ನು ಬರೆಯುತ್ತಿದ್ದ ನಾಲ್ವರು ನಕಲಿ ಅಭ್ಯರ್ಥಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಪರೀಕ್ಷಾ ಕೊಠಡಿಯ ಮೇಲ್ವಿಚಾರಣೆ ತಪಾಸಣೆ ವೇಳೆ ಅಸಲಿ ಅಭ್ಯರ್ಥಿಗಳ ಸೋಗಿನಲ್ಲಿ ಪರೀಕ್ಷೆ ಬರೆಯುತ್ತಿದ್ದ 6 ಮಂದಿ ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜು ಕೇಂದ್ರದಲ್ಲಿ ಹನುಮಂತ ಎಂಬ ಹೆಸರಿನಲ್ಲಿ ಮಲ್ಲಿಕಾರ್ಜುನ್, ಶೃಂಗೇರಿ ಪೊಲೀಸ್ ಠಾಣೆಯ ಸಿವಿಲ್ ಕಾನ್‌ಸ್ಟೇಬಲ್ ನಾಗಪ್ಪ ತುಕ್ಕನವರ್ ಹೆಸರಿನಲ್ಲಿ ಕೆಂಗೇರಿಯ ಜೆಎಸ್ಎಸ್​ ಇಂಜಿನಿಯರಿಂಗ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಹಾಲಪ್ಪ ಹರಳೂರು ಪರೀಕ್ಷೆ ಬರೆಯುತ್ತಿದ್ದರು.
ಅದೇ ರೀತಿ ಪೂರ್ವ ವಿಭಾಗದ ಜೀವನ ಭೀಮಾನಗರ ಹಾಗೂ ಇಂದಿರಾನಗರ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಪತ್ತೆ ಆಗಿದ್ದಾರೆ.
ಈ ಪೈಕಿ ಒಬ್ಬ ಅಭ್ಯರ್ಥಿ ಬ್ಲೂಟೂತ್ ಡಿವೈಸ್ ಮೂಲಕ ಕಾಪಿ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದೆಲ್ಲೆಡೆ ಇಂದು ವಿಶೇಷ ಮೀಸಲು ಪೊಲೀಸ್ ಪೇದೆ (ಬ್ಯಾಂಡ್ ಮನ್ ) ಪರೀಕ್ಷೆ ನಿಗದಿಯಾಗಿತ್ತು. 17,940 ಹುದ್ದೆಗಳಿಗಾಗಿ ಪರೀಕ್ಷೆ ನಡೆದಿತ್ತು. ಬೆಂಗಳೂರಿನ 36 ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಾಗಿದ್ದರು.