
ಬಂಗಾರಪೇಟೆ.ಮಾ೧೭: ದಲಿತರು, ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕರಾಗಿ ಜಾಗೃತರಾಗಬೇಕು ಎಂಬ ಆಶಯವನ್ನು ಕಾನ್ಷಿರಾಮ್ ಹೊಂದಿದ್ದರು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ರಮಣ್‌ಕುಮಾರ್ ರವರು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರರ ಪುತ್ಥಳಿ ಮುಂಭಾಗ ಬಿ.ಎಸ್.ಪಿ ಸಂಸ್ಥಾಪಕ ಮಾನ್ಯವರ್ ಕಾನ್ಷಿರಾಮ್ ರವರ ೮೯ನೇ ಹುಟ್ಟುಹಬ್ಬದ ಪ್ರಯುಕ್ತ ಕಾನ್ಷಿರಾಮ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ, ಕಾರ್ಯಕರ್ತರಿಗೆ ಹಂಚಿ, ಮಾತನಾಡಿದ ಅವರು, ಕಾನ್ಷಿರಾಮ್‌ರು ಪಕ್ಷವನ್ನು ಸಂಘಟಿಸಲು ಪಟ್ಟಂತಹ ಶ್ರಮ, ರಾಜಕೀಯ ಜಾಗೃತಿ ಇಂದಿಗೂ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಸೈದ್ಧಾಂತಿಕ ನಿಲುವುಗಳು ಹಾಗೂ ಬದ್ಧತೆಯ ಆಧಾರದ ಮೇಲೆ ಪಕ್ಷವನ್ನು ಬಲವಾಗಿ ಕಟ್ಟಬೇಕು ಎಂಬ ಅವರು ಮಾರ್ಗದಲ್ಲಿ ನಾವು ಸಾಗೋಣ ಎಂದು ತಿಳಿಸಿದರು.
ಕಾರ್ಯಕರ್ತರು ಇತಿಹಾಸ ಮತ್ತು ನಾಯಕರ ಕೊಡುಗೆಗಳನ್ನು ತಿಳಿದುಕೊಳ್ಳಬೇಕು. ಕಾನ್ಷಿರಾಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶಕ್ತಿಯಾಗಿದ್ದರು. ನಾಲ್ಕು ಸಾವಿರ ಮೀಟರ್ ದೂರ ಸೈಕಲ್‌ನಲ್ಲಿ ತೆರಳಿ ಗ್ರಾಮ ಗ್ರಾಮಗಳಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದ್ದರು. ಹಣಕ್ಕೆ ತಮ್ಮ ಮತವನ್ನು ಮಾರಿಕೊಳ್ಳಬೇಡಿ ಎನ್ನುವ ಮೂಲಕ ಜಾಗೃತಿ ಮೂಡಿಸಿದವರು. ಅಂಬೇಡ್ಕರ್‌ರವರು ನಿಮಗೆ ಮತದಾನದ ಹಕ್ಕು ನೀಡಿದ್ದಾರೆ. ಮತದಾನದ ಹಕ್ಕು ಪವಿತ್ರವಾಗಿದೆ. ಮತದಾನದಿಂದ ಇಡೀ ಸಮಾಜದ ಬದಲಾವಣೆ ಸಾಧ್ಯ ಎಂಬುದು ಅವರ ವಾದವಾಗಿತ್ತು ಎಂದು ನುಡಿದರು.
ವಿಜ್ಞಾನಿಯಾಗಿದ್ದ ಕಾನ್ಷಿರಾಮ್ ವ್ಯವಸ್ಥಿತವಾಗಿ ಚಿಂತಿಸಿ, ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೆಳಿಸಿದರು. ಸೈಕಲ್ ಮೇಲೆ ಊರೂರು ಸುತ್ತುತ್ತಿದ್ದ ಕಾನ್ಷಿರಾಮ್, ಕಾರ್ಯಕರ್ತರ ಮನೆಯಲ್ಲಿ ಉಂಡು ಅಲ್ಲೇ ಮಲಗುತ್ತಿದ್ದರು. ಇತರ ರಾಜಕೀಯ ಪಕ್ಷಗಳ ಚಮಚಾಗಿರಿ ಮಾಡುವುದನ್ನು ಬಿಡಬೇಕೆಂಬುದನ್ನು ಬಹುಜನರಿಗೆ ತಿಳಿ ಹೇಳಿದ ಮಹಾಪುರುಷರು ಕಾನ್ಷಿರಾಮ್ ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಆನಂದ್, ಮುಖಂಡರುಗಳಾದ ಕುಪ್ಪನಹಳ್ಳಿ ಆನಂದ್, ಚಿನ್ನಕೋಟೆ ಪಾರ್ವತಮ್ಮ, ಸಿದ್ದನಹಳ್ಳಿ ವೆಂಕಟರಾಮ್, ಕೀಲುಕೊಪ್ಪ ವಿನೋದ, ಪುತ್ರಸೊಣ್ಣೇನಹಳ್ಳಿ ಚಲಪತಿ, ಹುಣಸನಹಳ್ಳಿ ಪ್ರಸಾದ್, ಹುಣಸನಹಳ್ಳಿ ದ್ರಾಕ್ಷಾಯಿಣಿ, ನಾಯಕರಹಳ್ಳಿ ವೆಂಕಟೇಶಪ್ಪ, ಹೂವರಸನಹಳ್ಳಿ ಅಬ್ಬಯ್ಯಪ್ಪ, ಅನಿಗಾನಹಳ್ಳಿ ಜಿ.ಟಿ.ಎಸ್ ನಾರಾಯಣ ಸೇರಿದಂತೆ ಪಕ್ಷದ ಇತರೆ ಕಾರ್ಯಕರ್ತರು ಇದ್ದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಾಬಾ ಸಾಹೇಬರಿಗೆ, ಕಾನ್ಷಿರಾಮ್‌ರವರಿಗೆ, ಬಿಎಸ್‌ಪಿಗೆ ಜಯಘೋಷ ಕೂಗಿದರು.