ಕಾನೂನು ಸುವ್ಯವಸ್ಥೆ ವಿಫಲ: ಪಿಎಸ್‌ಐ ಅಮಾನತ್ತಿಗೆ ಒತ್ತಾಯ

ರಾಯಚೂರು,ನ.೪- ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾದ ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯ ಪಿಎಸ್‌ಐ ಅವರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಟ, ಮಾಚನೂರು, ಶಾಖಾಪೂರು ಗ್ರಾಮಗಳಲ್ಲಿ ದಲಿತರ ಮೇಲೆ ಹಲ್ಲೆಗಳು ಹಚ್ಚಾಗಿವೆ. ಅಟ್ರಾಸಿಟಿ ಕೇಸ್ ದುರ್ಬಲಗೊಳಿಸಲು ದಲಿತರ ಮೇಲೆ ರೇಪ್ ಕೇಸ್, ೩೦೭ ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ. ಮಲ್ಲಟ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಕುರಿತು ದೂರು ದಾಖಲಿಸಲಾಗಿತ್ತು ಮತ್ತು ಇದಕ್ಕೆ ಪ್ರತಿ ದೂರು ದಾಖಲಾಗಿತ್ತು. ಮೇಲ್ವರ್ಗದ ಜನಾಂಗದವರು ದಲಿತ ಕೇರಿ ನುಗ್ಗಿ ಹಲ್ಲೆ ಮಾಡಿದರೂ, ಇದನ್ನು ತಡೆಯುವಲ್ಲಿ ವಿಫವಾದ ಪಿಎಸ್‌ಐ ಅವರನ್ನು ಅಮಾನತ್ ಮಾಡಬೇಕೆಂದು ಒತ್ತಾಯಿಸಿದರು.
ಶಾಖಾಪೂರು ಗ್ರಾಮದಲ್ಲಿ ದಲಿತ ಮಹಿಳೆಗೆ ಕಿರುಕುಳ ಕೊಡುವ ಕುರಿತು ವಿಚಾರಿದ್ದಕ್ಕೆ, ವಾಲ್ಮೀಕಿ ಜನಾಂಗದವರಿಂದ ಹಲ್ಲೆ ಮಾಡಲಾಗಿದೆ. ಮಚಾನೂರು ಗ್ರಾಮದಲ್ಲಿ ಪಂಚಾಯತಿ ಅವ್ಯವಹಾರವನ್ನು ಬೈಲಿಗೆ ಎಳೆದಿದ್ದರಿಂದ, ನಮ್ಮ ಹೊಲದಲ್ಲಿ ಕುರಿಗಳು ಬಿದ್ದಿವೆ ಎಂದು ದಲಿತರ ಮೇಲೆ ಹಲ್ಲೆ ಮಾಡಿದ್ದರಿಂದ ಅಟ್ರಾಸಿಟಿ ದೂರು ದಾಖಲಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಅತ್ಯಾಚಾರ ದೂರು ದಾಖಲು ಮಾಡಿದ್ದಾರೆ. ಗ್ರಾಮಗಳಲ್ಲಿ ಈ ರೀತಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಸಿರವಾರ ಪಿಎಸ್‌ಐ ಕಾನೂನು ಕ್ರಮ ಜರುಗಿಸದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವರನ್ನು ಕೂಡಲೇ ವಜಾ ಮಾಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕ.ಪ್ರ.ಕ. ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಗಾರಲದಿನ್ನಿ, ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ಶಿವರಾಜ ಗಂಟಿ, ಹನುಮಂತ ಅರೋಲಿ, ಈರಪ್ಪ ಗಣಮೂರು ಉಪಸ್ಥಿತರಿದ್ದರು.