ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವದ್ದು

ಚನ್ನಮ್ಮನ ಕಿತ್ತೂರ,ಮಾ. 26: ದೇಶದ ಗಡಿ ಕಾಯುವ ಹೀರೋಗಳು ಸೈನಿಕರಾದರೆ ಆಂತರಿಕ ಭದ್ರತೆ ಕಾಯುವ ಪ್ರತ್ಯೇಕ್ಷ ಹೀರೋಗಳು ಪೋಲಿಸರು. ದೇಶದ ಭದ್ರತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೋಲಿಸರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಹೇಳಿದರು.
ನೂತನ ಪೋಲಿಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಠಾಣೆಗೆ ಬಂದ ಸಾರ್ವಜನಿಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಅವರ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕು ಸಾರ್ವಜನಿಕರಿಗೆ ವಿಳಂಬ ನೀತಿ ಅನುಸರಿಸಬಾರದು. ಜನರು ಕೊಟ್ಟ ದೂರನ್ನು ಆಲಿಸಬೇಕು. ಠಾಣೆಯ ವ್ಯಾಪ್ತಿಗೆ ಒಳಗೊಂಡಿರುವ ಹಳ್ಳಿಗಳಿಗೆ ತಿಂಗಳಲ್ಲಿ ಮೂರುಬಾರಿಯಾದರು ಭೇಟಿಯಾಗಿ ಜನರ ಕುಂದುಕೊರತೆ ಆಲಿಸಿ ಬಸ್‍ನಿಲ್ದಾಣ ಒಳಗೊಂಡಂತೆ ಜನದಟ್ಟಣೆಯ ಸ್ಥಳದಲ್ಲಿ ವಾಹನ ನಿಲುಗಡೆ ತಡೆಯಬೇಕು. ಶಾಲಾ ವಿದ್ಯಾರ್ಥಿಗಳಿಗೆ ಭೇಟಿಯಾಗಿ ಅವರ ಸಮಸ್ಯೆಗಳನ್ನಾಲಿಸುವಲ್ಲಿ ಮುಂದಾಗಬೇಕೆಂದರು.
ಜಿಲ್ಲೆಯಲ್ಲಿ 13 ಪೋಲಿಸ್ ಠಾಣೆಗಳು ಮಂಜೂರಾತಿ ದೊರೆತಿದೆ. ಇದರಲ್ಲಿ 9 ಠಾಣೆಯ ಕಾಮಗಾರಿ ಮುಕ್ತಾಯವಾಗಿವೆ. ಈಗಾಗಲೆ ಐಗಳಿ, ಕೂಡಚಿ, ನಿಪ್ಪಾಣಿ ಶಹರ, ಗ್ರಾಮೀಣ, ಚಿಕ್ಕೋಡಿ, ಖಾನಾಪೂರ, ಪೋಲಿಸ್ ಠಾಣೆಗಳು ಉದ್ಘಾಟನೆಯಾಗಿವೆ ಸದ್ಯದಲ್ಲಿ ಕುಲಗೋಡ, ಯಮಕನಮರಡಿ, ಸದಲಗಾ, ಘಟಪ್ರಭಾ, ಇವುಗಳ ಉದ್ಘಾಟನೆಗೆ ಕ್ರಮ ಕೈಗೊಳಲಾಗಿದೆ ಎಂದರು.
ಈ ವೇಳೆ ವರಿಷ್ಠಾಧಿಕಾರಿ ಎಸ್.ವ್ಹಿ. ಯಾದವ, ಬೈಲಹೊಂಗಲದ ಡಿಎಸ್‍ಪಿ ರವಿ ನಾಯಕ, ಸಿಪಿಐ ನಿತ್ಯಾನಂದ ಪಂಡಿತ, ಪಿಎಸ್‍ಐ ರಾಜು ಮಮದಾಪೂರೆ, ಕಾರ್ಯಪಾಲಕ ಅಭಿಯಂತರ ಎಂ ಜಯಚಂದ್ರರಾಜು, ಅಭಿಂಯತರ ವಾಸುದೇವ, ಗುತ್ತಿಗೆದಾರ ಸಂದೀಪ್‍ಗೌಡ, ಪೋಲಿಸ್ ಠಾಣೆಯ ಎಲ್ಲ ಸಿಬ್ಬಂದಿ, ಸಾರ್ವಜನಿಕರು ಇದ್ದರು.