ಕಾನೂನು ಸುವ್ಯವಸ್ಥೆ ಕಾಪಾಡಲು ಐಜಿಪಿ ಸೂಚನೆ

ಬೆಂಗಳೂರು,ಮೇ.೨೫-ನಗರದಲ್ಲಿ ರೌಡಿ ಚಟುವಟಿಕೆಗಳು,ಮಾದಕವಸ್ತು ದಂಧೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಜಿ-ಐಜಿಪಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಪರಾಧ ಕೃತ್ಯಗಳು ಕಾನೂನು ಸುವ್ಯವಸ್ಥೆಯ ಪರಾಮರ್ಶೆ ನಡೆಸಿದರು.
ನಗರದಲ್ಲಿ ಸೈಬರ್ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ಸೆನ್ ಪೊಲೀಸ್ ಠಾಣೆಗಳಿಗೆ ನಿಯೋಜಿಸಿ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕಾಟನ್ ಪೇಟೆ ಠಾಣೆಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದಾಖಲಾಗಿದ್ದ ನಕಲಿ ದರೋಡೆ ಪ್ರಕರಣ, ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ, ಬಿಟ್ ಕಾಯಿನ್ ಪ್ರಕರಣ ಮತ್ತು ನಾಗವಾರ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದ ಪ್ರಕರಣಗಳ ತನಿಖೆಯನ್ನು ಮುಂದುವರೆಸುವ ಬಗ್ಗೆ ಪರಾಮರ್ಶೆ ನಡೆಸಿದರು.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ,ವಿಶೇಷ ಪೊಲೀಸ್ ಆಯುಕ್ತ ಎಂ.ಎ.ಸಲೀಂ,ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಚಂದ್ರ ಶೇಖರ್ ಜಂಟಿ ಆಯುಕ್ತರಾದ ಅನುಚೇತ್,ಶರಣಪ್ಪ ಎಲ್ಲಾ ವಿಭಾಗದ ಡಿಜಿಪಿಗಳು ಸಭೆಯಲ್ಲಿ ಭಾಗವಹಿಸಿದ್ದರು.