ಕಾನೂನು ಸುವ್ಯವಸ್ಥೆಯಿಂದ ಜನರ ರಕ್ಷಣೆ ಸಾಧ್ಯ

ದಾವಣಗೆರೆ,ಸೆ.26: ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ, ಜನರ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆಯ ಮೂಲಕ ಪೊಲೀಸರು ಜನರ ರಕ್ಷಣೆ ಮಾಡುತ್ತಿದ್ದಾರೆಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಅರುಣ ಚಿತ್ರ ಮಂದಿರದ ಬಳಿ ನಿರ್ಮಾಣವಾಗಿರುವ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಗೌರವ ತರುವ ಇಲಾಖೆ ಇದಾಗಿದ್ದು, ಇದರಲ್ಲಿ ಕೆಲಸ ಮಾಡುವವರು ಕಷ್ಟ ಜೀವಿಗಳಾಗಿರುತ್ತಾರೆ. ಇವರಿಗೆ ಮೊದಲು ಏನೂ ಸೌಲಭ್ಯಗಳಿರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲ ಸವಲತ್ತು ದೊರೆಯುತ್ತಿದ್ದು, ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎಂದರು.
ಸೈನಿಕರು ಗಡಿಯಲ್ಲಿ ದೇಶ ಕಾಯುತ್ತಿದ್ದರೆ, ಪೊಲೀಸರು ದೇಶದ ಒಳಗೆ ಕಾಯುತ್ತಿದ್ದಾರೆ. ರಾಜ್ಯಾದ್ಯಂತ ಸಮುದಾಯ ಭವನಗಳು ಆಗಬೇಕು. ಇಲ್ಲಿ ಉತ್ತಮ ಭವನ ನಿರ್ಮಾಣವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಐವತ್ತು ವರ್ಷಗಳಿಂದ ನಾನು ಪೊಲೀಸ್ ಇಲಾಖೆಯನ್ನು ನೊಡಿಕೊಂಡು ಬಂದಿದ್ದೇನೆ. ಈಗ ಅಧಿಕಾರದಲ್ಲಿರುವ ಪಕ್ಷದಲ್ಲಿರಬಹುದು. ಆದರೆ, ಹಿಂದೆ ವಿರೋಧ ಪಕ್ಷದಲ್ಲಿದ್ದುದರಿಂದ ಪೊಲೀಸರು ಯರ‍್ಯಾರಿಗೆ ಹೇಗೆ ತೊಂದರೆ ಕೊಟ್ಟಿದ್ದಾರೆಂಬುದನ್ನು ನೋಡಿದ್ದೇನೆ. ಈಗಲೂ ನನ್ನ ಮೇಲೆ ನಾಲ್ಕು ಕೇಸ್‌ಗಳಿವೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನರಸಿಂಹಯ್ಯ ಅನ್ನುವ ಸಿಪಿಐ ಇದ್ದರು. ರಾಜ್ಯಕ್ಕೆ ಇಂದಿರಾಗಾAಧಿ ಬಂದಾಗಲೆಲ್ಲ ನಮ್ಮನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ, ಕೂರಿಸಿ ವಾಪಸ್ ಕಳೆಯುತ್ತಿದ್ದರು ಎಂದು ಸ್ಮರಿಸಿದರು.
ಒಳ್ಳೆಯ ರೀತಿ ಕೆಲಸ ಮಾಡಿದ್ದರೆ ನಿಮಗೆ ಯಾವ ರೋಗವೂ ಬರಲ್ಲ. ಆದರೆ, ಮುಠ್ಠಾಳಗಿರಿ ಮಾಡಿದ್ದರೆ ಕಾಯಿಗಳು ನಿಮ್ಮನ್ನು ಬಾಧಿಸಲಿವೆ. ನಿಮ್ಮನ್ನ ನೋಡಿದರೆ ಒಳ್ಳೆಯ ಕ್ರಿಕೆಟ್ ಪ್ಲೇರ‍್ಸ್ ಇದ್ದಂತೆ ಇದ್ದಿರಾ, ಬೇರೆ ದೇಶದ ಮೇಲೆ ನಿವೃತ್ತ ಪೊಲೀಸರ ತಂಡ ಮಾಡಿ ಕ್ರಿಕೆಟ್ ಆಡಿಸುವ ಮಟ್ಟಕ್ಕೆ ಸದೃಢರಾಗಿದ್ದೀರಿ. ಸೇವೆಯಲ್ಲಿದ್ದಾಗ ವ್ಯಾಯಾಮ ಮಾಡಿರುತ್ತಿರಿ, ಆದ್ದರಿಂದ ನಿವೃತ್ತಿಯ ನಂತರ ವ್ಯಾಯಾಮ ನಿಲ್ಲಿಸಬೇಡಿ, ದಿನವೂ ಪ್ರಾಕ್ಟಿಸ್ ಮಾಡಿ ಎಂದು ಸಲಹೆ ನೀಡಿದರು.
ಪೊಲೀಸರು ಜನರೊಂದಿಗೆ ಕೆಟ್ಟ ಭಾಷಯಲ್ಲಿ ಮಾತನಾಡ ಬಾರದು. ಒಳ್ಳೆಯ ಭಾಷೆಯಲ್ಲಿ ಮಾತನಾಡಿ, ಮನುಷ್ಯರನ್ನು ಮನುಷ್ಯರಂತೆ ಕಾಣಬೇಕು ಎಂದು ಹೇಳಿದರು.
ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಡಾ.ಶಂಕರ್ ಮಹಾದೇವಪ್ಪ ಬಿದರಿ ನಿವೃತ್ತ ಪೊಲೀಸ್ ಅಧಿಕಾರಿಗಳ ಭವನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಸವರಾಜಪ್ಪ, ರವಿ ನಾರಾಯಣ್, ಕರಿನಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.