ಕಾನೂನು ಸಾಕ್ಷರತಾ ಕಾರ್ಯಕ್ರಮ

ಬ್ಯಾಡಗಿ,ಮಾ.18: ಹಣ ಕೊಟ್ಟು ವಸ್ತು ಅಥವಾ ಸೇವೆ ಪಡೆದುಕೊಳ್ಳುವ ಪ್ರತಿಯೊಬ್ಬರೂ ಗ್ರಾಹಕರಾಗಿದ್ದಾರೆ. ಆದರೆ ಹೆಚ್ಚಿನ ಗ್ರಾಹಕರಿಗೆ ತಮಗೆ ಹಕ್ಕುಗಳಿವೆ ಎಂಬುದೇ ಗೊತ್ತಿರುವುದಿಲ್ಲ. ಇದನ್ನು ಎಲ್ಲರಿಗೂ ತಿಳಿಸುವುದು ಸೇರಿದಂತೆ ಜನರು ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇ ಗ್ರಾಹಕರ ಹಕ್ಕುಗಳ ದಿನದ ಉದ್ದೇಶವಾಗಿದೆ ಎಂದು ದಿವಾಣಿ ನ್ಯಾಯಾಧೀಶ ಎಸ್.ಎಂ.ಧನುರಾಜ್ ಹೇಳಿದರು.
ಪಟ್ಟಣದ ತಾಲೂಕಾ ಕಚೇರಿಯ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕ ಸಂರಕ್ಷಣಾ ಕಾಯಿದೆ-2019 ಪ್ರಕಾರ, ಖರೀದಿಸುವ ಉತ್ಪನ್ನ ಯಾವುದೇ ಮಟ್ಟದಲ್ಲಿ ದೋಷಪೂರಿತವಾಗಿದೆ ಎಂದು ಕಂಡುಬಂದಲ್ಲಿ, ಉತ್ಪನ್ನದ ಸಂಪೂರ್ಣ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು. ಗ್ರಾಹಕರ ಹಕ್ಕುಗಳನ್ನು ಉತ್ತೇಜಿಸಲು, ರಕ್ಷಿಸಲು ಮತ್ತು ಜಾರಿಗೊಳಿಸುವ ಉದ್ದೇಶದಿಂದ ರಚನೆಯಾಗಿರುವ ಸಿಸಿಪಿಎ, ವಿವಾದದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಮಧ್ಯಸ್ಥಿಕೆ ವಹಿಸುತ್ತದೆ. ಪ್ರಕರಣಗಳ ಮಧ್ಯಸ್ಥಿಕೆ ಮತ್ತು ಇ-ಫೈಲಿಂಗ್‍ಗೆ ಅವಕಾಶವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ತಹಶೀಲ್ದಾರ ಎಸ್.ಎ.ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಹಕರ ಹಕ್ಕುಗಳ ಬಗ್ಗೆ ವಿವರಿಸಿದರು. ವಕೀಲರಾದ ಭಾರತಿ ಕುಲಕರ್ಣಿ “ಗ್ರಾಹಕರ ಹಿತರಕ್ಷಣೆ ಕಾಯ್ದೆ ಮತ್ತು ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳು” ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್.ಲಮಾಣಿ, ಪ್ಯಾನಲ್ ವಕೀಲರಾದ ಎಸ್.ಎಸ್.ಕೊಣ್ಣೂರ, ಎಂ.ಜೆ.ಪಾಟೀಲ, ಸಿ.ಸಿ. ದಾನಣ್ಣನವರ, ಎಂ.ಎಸ್.ಕೊಪ್ಪದ, ಕಂದಾಯ ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಂದಾ ಮಲ್ಲನಗೌಡ್ರ ಪ್ರಾರ್ಥಿಸಿದರು. ಎಸ್.ಎಸ್.ಕೊಣ್ಣೂರ ಸ್ವಾಗತಿಸಿ, ವಂದಿಸಿದರು. ಗುಂಡಪ್ಪ ಹುಬ್ಬಳ್ಳಿ ನಿರೂಪಣೆ ಮಾಡಿದರು.