ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನ ಪರಿವರ್ತನೆಗೆ ಸರ್ಕಾರಿ ವೀಕ್ಷಣಾಲಯದ ಪಾತ್ರ

ಕಲಬುರಗಿ.ಫೆ.23: ಬೆಳೆಯುವ ಹಂತದಲ್ಲಿರುವ ಕೆಲ ಮುಗ್ದ ಮನಸ್ಸಿನ ಮಕ್ಕಳು ಯಾವುದೋ ಪ್ರಭಾವಕ್ಕೆ ಒಳಗಾಗಿ ಕೆಲವೊಮ್ಮೆ ಎಡವುದುಂಟು. ಆದಾಗ್ಯೂ, ಅವರನ್ನು ಕಠಿಣ ಕ್ರಮಗಳ ಮೂಲಕ ಶಿಕ್ಷಿಸಲಾಗುವುದಿಲ್ಲ. ಅವರ ಮನ ಪರಿವರ್ತನೆಗಾಗಿಯೇ ಸರ್ಕಾರಿ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ನಗರದಲ್ಲಿ ಸರ್ಕಾರಿ ವೀಕ್ಷಣಾಲಯವಿದ್ದು, ಅಲ್ಲಿ ಬರುವ ಮಕ್ಕಳ ಮನಪರಿವರ್ತನೆಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
ಸಮಾಜದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಜೈಲು ಶಿಕ್ಷೆ ಕಡ್ಡಾಯ. ಆದಾಗ್ಯೂ, ಅಪ್ರಾಪ್ತ ವಯಸ್ಸಿನ ಮಕ್ಕಳು ತಿಳಿದೋ, ತಿಳಿಯದೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರ ಮನ ಪರಿವರ್ತನೆಗಾಗಿ ಇರುವ ಸರ್ಕಾರಿ ವೀಕ್ಷಣಾಲಯದಲ್ಲಿ ಯಾವ ರೀತಿ ಅವರ ಮನ ಪರಿವರ್ತನೆ ಮಾಡಲಾಗುತ್ತಿದೆ ಎಂಬುದರ ಕುರಿತು ಸರ್ಕಾರಿ ವೀಕ್ಷಣಾಲಯದ ಕ್ರಮಗಳ ಕುರಿತು ಒಂದಿಟ್ಟು ಮಾಹಿತಿ.
ತಪ್ಪು ಮಾಡದ ಮನುಷ್ಯನಿಲ್ಲ. ಆದಾಗ್ಯೂ, ಕೆಲ ಮುಗ್ದ ಮನಸ್ಸಿನ ಮಕ್ಕಳು ಯಾವುದೋ ಪ್ರಭಾವಕ್ಕೆ ಒಳಗಾಗಿ ಕೆಲವೊಮ್ಮೆ ಎಡವುದುಂಟು. ಆದಾಗ್ಯೂ, ಅವರನ್ನು ಕಠಿಣ ಕ್ರಮಗಳ ಮೂಲಕ ಶಿಕ್ಷಿಸಲಾಗುವುದಿಲ್ಲ. ಅವರ ಮನ ಪರಿವರ್ತನೆಗಾಗಿಯೇ ಸರ್ಕಾರಿ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿದೆ.
ತಿಳಿದೋ ತಿಳಿಯದೋ ಮುಗ್ದ ಜೀವಗಳು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅವರಿಗೆ ಜೈಲು ಶಿಕ್ಷೆಗೆ ಒಳಪಡಿಸುವಂತಿಲ್ಲ. ಜೈಲು ಶಿಕ್ಷೆಗೆ ಒಳಪಡಿಸಿದರೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀಳಬಹುದು. ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕಾದವರು ಮುಂದೆ ತಪ್ಪು ಹಾದಿ ಹಿಡಿಯಬಹುದು ಎನ್ನುವ ಕಾರಣಕ್ಕೆ ಸರ್ಕಾರಿ ವೀಕ್ಷಣಾಲಯದಲ್ಲಿ ಇಟ್ಟು ಅವರ ಮನ ಪರಿವರ್ತನೆಗೆ ಪ್ರಯತ್ನ ಮಾಡಬೇಕು ಎಂದು ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ ಹೇಳುತ್ತದೆ. ಅದರಂತೆ ನಗರದಲ್ಲಿ ಸರ್ಕಾರಿ ವೀಕ್ಷಣಾಲಯವಿದ್ದು, ಅಲ್ಲಿ ಬರುವ ಮಕ್ಕಳ ಮನ ಪರಿವರ್ತನೆಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ.
ಸದ್ಯ 25 ಮಕ್ಕಳ ರಕ್ಷಣಾ ಸಾಮಥ್ರ್ಯ ಇರುವ ನಗರದ ವೀಕ್ಷಣಾಲಯದಲ್ಲಿ ಸದ್ಯ ಕಲಬುರ್ಗಿ ಜಿಲ್ಲೆಯ ನಾಲ್ವರು ಹಾಗೂ ಯಾದಗಿರಿ ಜಿಲ್ಲೆಯ ಇಬ್ಬರು ಸೇರಿ ಆರು ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಪಟ್ಟಿದ್ದಾರೆ. ಮಕ್ಕಳ ಕಾನೂನು ಸಂಘರ್ಷಕ್ಕೆ ವಿಶೇಷ ನ್ಯಾಯಾಲಯ ಇರುವ ಕಾರಣ ಬಹುತೇಕ ಮಕ್ಕಳು ಹೆಚ್ಚಿನ ದಿನ ವೀಕ್ಷಣಾಲಯದಲ್ಲಿ ಇರುವುದಿಲ್ಲ. ಅವರು ಇರುವಷ್ಟು ದಿನ ಅವರ ಮನಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ.
ಮಕ್ಕಳಲ್ಲಿ ಮನೋಸ್ಥೈರ್ಯ ತುಂಬಲು ಪ್ರತಿ ಗುರುವಾರದಂದು ಬೆಂಗಳೂರು ಮೂಲದ ಎನ್‍ಜಿಓ ಸಂಸ್ಥೆಯಿಂದ ಆನ್‍ಲೈನ್ ತರಬೇತಿ, ವೈಯಕ್ತಿಕ ವ್ಯಕ್ತಿತ್ವ ಹೆಚ್ಚಿಸುವ ತರಬೇತಿ, ಕೌಶಲ್ಯಾಭಿವೃದ್ಧಿ ತರಬೇತಿ, ಕಂಪ್ಯೂಟರ್ ತರಬೇತಿ, ಕಲೆ, ಚಿತ್ರಕಲೆ, ಕೈಗಾರಿಕೆ ಮುಂತಾದ ತರಬೇತಿಗಳನ್ನು ಮಕ್ಕಳ ಮನೋಸ್ಥಿತಿ ಮತ್ತು ಅವರ ಆಸೆಯ ಆಧಾರದಲ್ಲಿ ನೀಡಲಾಗುತ್ತದೆ.
ಕೋವಿಡ್ ಸಂದರ್ಭದಲ್ಲಿ ಬಟ್ಟೆಯಿಂದ ಮಾಸ್ಕ್ ತಯಾರಿಸಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ಓದುವ ಮಕ್ಕಳ ಅನುಕೂಲಕ್ಕಾಗಿ ಓರ್ವ ಶಿಕ್ಷಕಿಯನ್ನು ಕೂಡ ನಿಯೋಜನೆ ಮಾಡಲಾಗಿದ್ದು, ನಿತ್ಯ ತರಗತಿ ನಡೆಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೂ ಹಿನ್ನಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜ್ಞಾನಾರ್ಜನೆ ಹೆಚ್ಚಿಸುವುದಲ್ಲದೇ ಮಕ್ಕಳ ದೈಹಿಕ ಆರೋಗ್ಯಕ್ಕಾಗಿ ವೀಕ್ಷಣಾಲಯದಲ್ಲಿ ಆಟವಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವೀಕ್ಷಣಾಲಯದಲ್ಲಿ ಇರುವ ಮಕ್ಕಳ ನಡುವೆ ಸಂಘರ್ಷ ಉಂಟಾಗದಂತೆ ಸಿಬ್ಬಂದಿ ಮೂಲಕ ಮುತುವರ್ಜಿ ವಹಿಸುತ್ತಿದ್ದಾರೆ.
ವೀಕ್ಷಣಾಲಯದಲ್ಲಿ ಉಪಹಾರ ಸೇರಿ ಮೂರು ಹೊತ್ತು ಗುಣಮಟ್ಟದ ಆಹಾರ, ಪ್ರತಿ ಭಾನುವಾರದಂದು ಮಾಂಸದೂಟ, ಹಬ್ಬ ಹರಿದಿನಗಳಲ್ಲಿ ವಿಶೇಷ ಭೋಜನವನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ. ಇಷ್ಟೆಲ್ಲ ಅನುಕೂಲ ಕಲ್ಪಿಸಿ ಇಲ್ಲಿನ ಮಕ್ಕಳ ಮನೋಸ್ಥಿತಿ ಸರಿಪಡಿಸಲು ಪ್ರಯತ್ನಿಸಿದರೂ ಕೂಡ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಮಕ್ಕಳು ವೀಕ್ಷಣಾಲಯದಿಂದ ಪರಾರಿಯಾದ ಹಲವು ಪ್ರಕರಣಗಳು ವರದಿಯಾಗಿವೆ. ತೀರಾ ಇತ್ತೀಚೆಗೆ ಬಾಲಕರಿಬ್ಬರೂ ತಪ್ಪಿಸಿಕೊಂಡು ಹೋಗಿರುವ ಘಟನೆ ನಡೆದಿದ್ದು, ಬಳಿಕ ಪೋಲಿಸರ ಸಹಾಯದಿಂದ ಮರಳಿ ಕರೆತರಲಾಗಿದೆ.
ವೀಕ್ಷಣಾಲಯದಲ್ಲಿ ಕಾವಲುಗಾರರು, ಅಡಿಗೆ ಮಾಡುವವರು, ಕೌನ್ಸಿಲರ್ ಸೇರಿ ಒಟ್ಟು 11 ಸಿಬ್ಬಂದಿಗಳಿದ್ದಾರೆ. ಅವರಲ್ಲಿ ನಾಲ್ವರು ಮಾತ್ರ ಸರ್ಕಾರಿ ನೌಕರರಾಗಿದ್ದಾರೆ. ಇನ್ನುಳಿದವರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಹೊರಗುತ್ತಿಗೆ ಬದಲಾಗಿ ಗುತ್ತಿಗೆ ಅಥವಾ ಖಾಯಂ ನೌಕರರನ್ನು ನೇಮಕ ಮಾಡಿದರೆ ವೀಕ್ಷಣಾಲಯ ಮತ್ತಷ್ಟು ಪರಿಣಾಮಕಾರಿಯಾಗಲಿದೆ. ಜೊತೆಗೆ ಮಕ್ಕಳು ತಾವು ಮಾಡಿದ ತಪ್ಪು ತಿದ್ದಿಕೊಂಡು ಪುನರ್ವಸತಿಗೆ ಅನುಕೂಲ ಆಗುವಂತೆ ಮತ್ತು ಅವರು ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಆಗುವಂತೆ ಹೆಚ್ಚೆಚ್ಚು ತರಬೇತಿ ನೀಡುವ ಅಗತ್ಯವಿದೆ.