ಕಾನೂನು ವಿದ್ಯಾರ್ಥಿಗಳಿಂದ ಬಡ್ತಿಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ನ.29:- ಯುಜಿಸಿ ಮಾರ್ಗಸೂಚಿಯ ಪ್ರಕಾರ ಕಾನೂನು ವಿದ್ಯಾರ್ಥಿಗಳಿಗೆ ಬಡ್ತಿ ನೀಡಿ ಹಾಗೂ ಮುಂದಿನ ಸೆಮಿಸ್ಟರ್‍ಗಳ ತರಗತಿ ನಡೆಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಮೈಸೂರು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪರೀಕ್ಷೆ ನಡೆಸದಂತೆ ತಡೆ ಕೋರಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಪರೀಕ್ಷೆ ನಡೆಸುವಂತೆ ಆದೇಶಿಸಿದೆ, ಆದರೆ ಅದೇಶಿಸಿ 4-5 ದಿನ ಕಳೆದರೂ ಕಾನೂನು ವಿಶ್ವವಿದ್ಯಾಲಯವು ಪರೀಕ್ಷೆ ನಡೆಸುವ ಸಂಬಂಧವಾಗಿ ಯಾವುದೇ ಸೂಚನೆಯನ್ನು ಇದುವರೆಗೂ ನೀಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲಿ ಇದ್ದಾರೆ ಎಂದರು.
ಯುಜಿಸಿ ನಿರ್ದೇಶನದ ಅನುಸಾರ ಕೋವಿಡ್ ಸಂರ್ದಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಬಡ್ತಿ ನೀಡಬೇಕಿತ್ತು. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈಗಾಲೇ ಪರೀಕ್ಷೆಗಳು ಮುಗಿದಿದ್ದರೂ ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇತ್ತ ಪರೀಕೆಯನ್ನೂ ನಡೆಸದೆ, ಅತ್ತ ಬಡ್ತಿಯನ್ನು ನೀಡದೇ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದೆ. ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ಸೂಚನೆ ಈವರೆಗೂ ಸಿಕ್ಕಿಲ್ಲ.
ಈ ಹಿಂದೆ 2-3 ಬಾರಿ ಪರೀಕ್ಷೆಗಳ ವೇಳಾ ಪಟ್ಟಿ ಪ್ರಕಟಿಸಿ ಮುಂದೂಡಲಾಗಿದೆ. ಆದರೆ ಈಗ ಏಕಾಏಕಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆ ಉಂಟಾಗುತ್ತದೆ. ಒಂದು ವೇಳೆ ಪರೀಕ್ಷೆ ನಡೆಸಿದರೆ ಅಂತಿಮ ವರ್ಷದ ವಿದ್ಯಾರ್ಥಿಗಳು 7 ತಿಂಗಳಿನಲ್ಲಿ ಬಾಕಿ ಉಳಿಸಿಕೊಂಡಿರುವ ವಿಷಯಗಳ ಅಂದರೇ 3 ಸೆಮಿಸ್ಟರ್‍ಗಳ ಪರೀಕ್ಷೆಯನ್ನು ಎದುರುಸಬೇಕಾಗುತ್ತದೆ, ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಉಂಟಾಗಲಿದೆ.
ಅಲ್ಲದೆ ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಕಾನೂನು ವಿ.ವಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಕೋವಿಡ್ ರೂಪಾಂತರ ವೈರಸ್‍ನ ಕಾರಣಕ್ಕೆ ರಾಜ್ಯಗಳ ಗಡಿಗಳನ್ನು ಮುಚ್ಚುತ್ತಿರುವುದರಿಂದ ಆ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗಲಿದೆ. ಅಲ್ಲದೆ ಎಲ್ಲಾ ಸೆಮಿಸ್ಟರ್ ನ ಪ್ರವೇಶ ಪ್ರಕ್ರಿಯೆಗಳು ಮುಗಿದಿದ್ದರೂ ಮೊದಲ ಸೆಮಿಸ್ಟರ್ ನ ವಿದ್ರ್ಯಾಥಿಗಳಿಗೆ ಮಾತ್ರ ಈಗ ತರಗತಿಗಳು ನಡೆಯುತ್ತಿದೆ. ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿಲ್ಲ.
ಕಾನೂನು ವಿಶ್ವವಿದ್ಯಾಲಯದ ಆಡಳಿತ ವೈಫಲ್ಯವೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ.
ಆದ್ದರಿಂದ ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂತಿಮ ವರ್ಷವನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಸಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಡ್ತಿ ನೀಡಿ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಕೂಡಲೇ ನಡೆಸಬೇಕು, ಅಂತಿಮ ವರ್ಷ ಪೂರೈಸಿದ ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ ವಿಷಯಗಳ ಪರೀಕ್ಷೆಗಳನ್ನು ಕೂಡಲೇ ನಡೆಸಬೇಕು.
ಅಥವಾ ಬಡ್ತಿ ನೀಡಬೇಕು. ಕಾನೂನು ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲು ಆದೇಶಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.