ಕಾನೂನು ರೀತಿ ಜಿಂದಾಲ್ ಗೆ ಜಮೀನು ನೀಡಲು ಕೊಂಡಯ್ಯ ಒತ್ತಾಯ

 • ನಾನು ಎಂದೂ ಕೈಗಾರಿಕೆ ಪರ,
 • ಅನ್ಯಾಯದ ವಿರುದ್ಧ ಸದಾಧ್ವನಿ ಎತ್ತಿರುವೆ
 • ಜಿಂದಾಲ್ ಪರ ನಾನೇ ಪಿ.ಎಲ್,. ಹಾಕುವೆ
 • ಜಿಂದಾಲ್ ನಿಂದ ಜಿಲ್ಲೆಯ ಅಭಿವೃದ್ಧಿ
  ಬಳ್ಳಾರಿ, ಜೂ.03: ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಜಿಂದಾಲ್ ಸಂಸ್ಥೆಗೆ ಕಾನೂನು ರೀತಿಯಲ್ಲಿಯೇ ಸರ್ಕಾರ ಮಾಡಿಕೊಂಡ ಒಪ್ಪಂದದ ರೀತಿಗೆ ಅನುಗುಣವಾಗಿ ಆ ಸಂಸ್ಥೆಗೆ ಜಮೀನು ಪರಭಾರೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
  ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಇಂದಿರಾಗಾಂಧಿ ಅವರು ಪ್ರಧಾನಿಯಾದಾಗ ತೋರಣಗಲ್ಲು ವಿಶಾಖಪಟ್ಟಂ ಮತ್ತು ಸೇಲಂನಲ್ಲಿ ಉಕ್ಕಿನ ಕಾರ್ಖಾನೆ ಆರಂಭಿಸಲು ಮುಂದಾಗಿತ್ತು. ವಿಶಾಖಪಟ್ಟಣ ಸೇಲಂನಲ್ಲಿ ಕೇಂದ್ರ ಸರ್ಕಾರದಿಂದಲೇ ಆಯ್ತು ಆದರೆ ನಮ್ಮಲ್ಲಿ ಆಗಲಿಲ್ಲ ಅದಕ್ಕಾಗಿ 1994ರಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ, ಕಚ್ಚಾ ಅದಿರು, ನೀರು ಮೊದಲಾದ ಸೌಲಭ್ಯ ನೀಡುವುದಾಗಿ ಹೇಳಿ ಒಪ್ಪಂದ ಮಾಡಿಕೊಂಡು 1995 ರಲ್ಲಿ 3430 ಎಕರೆ ಜಮೀನು ಲೀಸ್ ಕಮ್ ಸೇಲ್ ನಲ್ಲಿ ಮಂಜೂರು ಮಾಡಿತು. ಇದನ್ನು 10 ವರ್ಷಗಳ ನಂತರ ಸರ್ಕಾರ ಷರತ್ತಿನಂತೆ 2005ರಲ್ಲಿ ಪರಭಾರೆ ಮಾಡಿತು. ನಂತರ 2ನೇ ಬಾರಿ 615 ಎಕರೆಯನ್ನು 2011ರಲ್ಲಿ ಪರಭಾರೆ ಮಾಡಿದೆ.
  ಆದರೆ 2006ರಲ್ಲಿ ಒಪ್ಪಂದ ಮಾಡಿಕೊಂಡ 2 ಸಾವಿರ ಎಕರೆ ಮತ್ತು 2007ರಲ್ಲಿ ಒಪ್ಪಂದ ಮಾಡಿಕೊಂಡ 1667 ಎಕರೆ ಜಮೀನನ್ನು ಈ ಹಿಂದಿನಂತೆ ಒಪ್ಪಂದಂತೆ ಷರತ್ತುಗಳನ್ನು ಪೂರೈಸಿದ್ದರೂ ಈಗ ಪರಭಾರೆ ಮಾಡದೆ ತಡೆ ಹಿಡಿದಿದೆ.
  ಇದಕ್ಕೆ ಕಾರಣ ಸರ್ಕಾರ ಕಡಿಮೆ ಬೆಲೆಗೆ ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡುತ್ತಿದೆ ಎಂಬ ಆರೋಪ ಆದರೆ 2006 ಮತ್ತು 07ರಲ್ಲಿಯೇ ಸರ್ಕಾರ ಮಾಡಿಕೊಂಡ ಒಪ್ಪಂದದಂತೆ ಪರಭಾರೆ ಮಾಡಬೇಕಿದೆ.
  2019ರ ಮೇ 27ರಂದು ಸಚಿವ ಸಂಪುಟ ಸಭೆ ಮತ್ತು 2021ರ ಮೇ 6ರ ಸರ್ಕಾರಿ ಆದೇಶದಂತೆ ಸರ್ಕಾರ ನಡೆದುಕೊಳ್ಳಬೇಕಿದೆ. ಈ ಬಗ್ಗೆ ಸರಿಯಾಗಿ ತಿಳಿಯದೆ ಪೂರ್ವಗ್ರಹ ಪೀಡಿತರಾಗಿ ವಿರೋಧಿಸುವುದು ಸರಿಯಲ್ಲ. ವಿರೋಧಿಸುವವರಿಗೆಲ್ಲ ಸರ್ಕಾರದ ಒಪ್ಪಂದದ ಬಗ್ಗೆ ತಿಳಿಸಿರುವೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ. ಇಲ್ಲದಿದ್ದರೆ ನ್ಯಾಯಾಲಯ ಇದ್ದೇ ಇದೆ ಎಂದರು.
  ಜಿಂದಾಲ್ ಬರುವ ಮುನ್ನ ಇಲ್ಲಿನ ಪರಿಸ್ಥಿತಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ತಿಳಿಯಬೇಕು,
  ಸರ್ಕಾರ ತನ್ನ ಒಪ್ಪಂದಕ್ಕೆ ತಕ್ಕದಾದ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಇತರೆ ಕಂಪನಿಗಳು ಕೈಗಾರಿಕೆ ಹೇಗೆ ಬರುತ್ತವೆ ಎಂದು ಪ್ರಶ್ನಿಸಿದರು.
  ಯಾರೋ ಕೆಲವು ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಜನರು, ಈ ಭೂ ಪರಭಾರೆ ವಿಚಾರದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾರೆ ಮತ್ತು ಜನರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ನಾನು ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ನನ್ನ ಸ್ನೇಹಿತರಿಗೆ, ಈ ಭೂ ಪರಭಾರೆ ವಿಚಾರದಲ್ಲಿ ಕಾನೂನು ಬದ್ಧವಾಗಿರುವ ಸ್ಪಷ್ಟ ಚಿತ್ರಣವನ್ನು ನೀಡಿದ್ದು ಇದರಿಂದ ಸಾರ್ವಜನಿಕ ಗೊಂದಲಗಳಿಗೆ ತೆರೆ ಎಳೆಯುತ್ತದೆ ಎಂದು ನಂಬಿದ್ದೇನೆಂದರು.
  ಕೊನೆಯದಾಗಿ ರಾಜ್ಯ ಸರ್ಕಾರವು ಇಂದಿಗೂ ಕೂಡ ನೂರಾರು ಲೀಸ್ ಕಮ್ ಸೇಲ್ ಪತ್ರಗಳನ್ನು ಶುದ್ಧ ಕ್ರಯ ಪತ್ರಗಳಾಗಿ ಕಾರ್ಯಗತಗೊಳಿಸುತ್ತಿದೆ. ಆದರೆ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಿದ ಹೊರತಾಗಿಯು ಜಿಂದಾಲ್‌ ಕಂಪನಿಗೆ ಭೂ ಪರಭಾರೆ ಮಾಡುವ ಕಾರ್ಯ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಸರ್ಕಾರ ಜಿಂದಾಲ್‌ಗೆ ಮಲತಾಯಿ ಧೋರಣೆ ಮಾಡಬಾರದು. ಹಿಂದುಳಿದ ಕಲ್ಯಾಣ ಕರ್ನಾಟಕ ಮತ್ತು ಬಳ್ಳಾರಿ ಭಾಗದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಜಿಂದಾಲ್‌ಗೆ ಭೂ ಪರಭಾರೆ ಮಾಡಬೇಕೆಂದು ಆಗ್ರಹಿಸುವುದಾಗಿ ಕೊಂಡಯ್ಯ ಹೇಳಿದರು.
  ಸೇಲ್ ಡೀಡ್ ಮಾಡಿ
  ಸುದ್ದಿಗೋಷ್ಠಿಯಲ್ಲಿದ್ದ ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ್, ಕೈಗಾರಿಕೆಗಳನ್ನು ಸ್ಥಾಪಿಸಿದ ಲಕ್ಷ್ಮಿ ಮಿತ್ತಲ್, ಉತ್ತಮಗಾಲ್ವ, ಎನ್.ಎಂ.ಡಿ.ಸಿ ಸಂಸ್ಥೆಗಳಿಗೆ ಜಮೀನು ಪರಭಾರೆ ಮಾಡಿದೆ. ಆದರೆ ಕೈಗಾರಿಕೆ ಸ್ಥಾಪಿಸಿ ಲಕ್ಷಾಂತರ ಜನಕ್ಕೆ ಉದ್ಯೋಗ ಕಲ್ಪಿಸಿರುವ ಜಿಂದಾಲ್ ಸಂಸ್ಥೆಗೆ ಒಪ್ಪಂದದ ಪ್ರಕಾರ ಸರ್ಕಾರ ಅನ್ಯಾಯ ಮಾಡದೆ ಸೇಲ್ ಡೀಡ್ ಮಾಡಿಕೊಡಬೇಕೆಂದರು. ಸಂಸ್ಥೆಯ ಪದಾಧಿಕಾರಿಗಳಾದ ಯಶವಂತರಾಜ್, ಶ್ರೀನಿವಾಸ್, ಎ.ಮಂಜುನಾಥ, ಮತ್ತು ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಇದ್ದರು.