ಕಾನೂನು ಬಾಹಿರ ಶಿಕ್ಷಣ ಚಟುವಟಿಕೆಗೆ ಅಧಿಕಾರಗಳ ಬೆಂಬಲ-ಆರೋಪ

ಕೋಲಾರ,ಮಾ.೨೫:ಜಿಲ್ಲೆಯ ಕೆಲ ಪಿಯು ಕಾಲೇಜುಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಅಕ್ರಮಗಳಿಗೆ ಶಿಕ್ಷಣ ಇಲಾಖೆಯ ಡಿಡಿಪಿಯು ಹಾಗೂ ಕಚೇರಿಯ ಎಫ್‌ಡಿಎ ಅಧಿಕಾರಿಗಳೇ, ನೇರವಾಗಿ ಕೆಲ ಪಿಯು ಕಾಲೇಜುಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ರೈತ ಸೇನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರ ವಲಯದ ಡಿಡಿಪಿಯು ಕಚೇರಿಯಲ್ಲಿ ಉಪನಿರ್ದೇಶಕರಾದ ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾರು ಬೇಕಾದರೂ ಶಾಲಾ ಕಾಲೇಜುಗಳನ್ನು ಎಲ್ಲಿ ಬೇಕಾದರು ಪ್ರಾರಂಭಿಸಬಹುದಾಗಿದೆ, ಜಿಲ್ಲೆಯ ಕೆಜಿಎಫ್ ತಾಲೂಕಿನ ಆಲದ ಮರದ ಸಮೀಪದ ಶ್ರೀ ನಾರಾಯಣಿ ಪಿಯು ಕಾಲೇಜು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ಕಾಲೇಜು ನಡೆಸುತ್ತಿರುವುದಕ್ಕೆ, ಪಿಯು ಇಲಾಖೆ ಅಧಿಕಾರಿಗಳೇ ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಕೆಜಿಎಫ್‌ನ ಶ್ರೀ ನಾರಾಯಣಿ ಕಾಲೇಜಿಗೆ ದಾಖಲಾತಿಯನ್ನು ಮಾಡಿಸಿಕೊಂಡು, ವಿದ್ಯಾರ್ಥಿಗಳಿಗೆ ಜೀನಿಯಸ್ ನ್ಯಾಷನಲ್ ಪಿಯು ಕಾಲೇಜಿನ ಹೆಸರಿನಲ್ಲಿ ದಾಖಲೆಗಳನ್ನ ನೀಡುವ ಮೂಲಕ, ವಿದ್ಯಾರ್ಥಿ ಮತ್ತು ಇಲಾಖೆಯನ್ನು ವಂಚಿಸುವ ಕೆಲಸದಲ್ಲಿ ಶ್ರೀ ನಾರಾಯಣಿ ಪಿಯು ಕಾಲೇಜು ಆಡಳಿತ ಮಂಡಳಿಯಿಂದ ನಡೆಯುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಈ ಹಿಂದೆ ಜೀನೀಯಸ್ ಕಾಲೇಜಿನ ಮೇಲೆ ದೂರುಗಳು ಸಾಕಷ್ಟು ಇದ್ದು, ಅದೇ ಕಾಲೇಜಿನ ಹೆಸರಲ್ಲಿ ವಿದ್ಯಾರ್ಥಿಗಳ ಶಾಲಾ ದಾಖಲಾತಿಯನ್ನು ನೀಡಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ಬಿ. ಮುನಿವೆಂಕಟಪ್ಪ, ಯಲವಾರ ವಿಶ್ವನಾಥ್‌ಗೌಡ, ಕಾಮದೇನಹಳ್ಳಿ ವೆಂಕಟಾಚಲಪತಿ, ಕೆ.ಆರ್. ರವಿ, ಮಕ್ಸೂದ್ ಪಾಷಾ, ಅಮಾನ್ ತ್ಯಾಗರಾಜ್ ಉಪಸ್ಥಿತರಿದ್ದರು.