ಕಾನೂನು ಪ್ರಕಾರ ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆ

ಬೆಂಗಳೂರು,ಆ.೬- ಬಿಬಿಎಂಪಿ ವಾರ್ಡ್‌ಗಳ ಮೀಸಲಾತಿಯನ್ನು ಸರ್ಕಾರ ಕಾನೂನು ಪ್ರಕಾರವೇ ಮಾಡಿದೆ. ಕಾನೂನು ಉಲ್ಲಂಘನೆ ಆಗಿಲ್ಲ, ಕಾಂಗ್ರೆಸ್‌ನವರಿಗೆ ಚುನಾವಣೆ ಬೇಡ. ಹಾಗಾಗಿ, ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಮತ್ತು ಸರ್ಕಾರದ ಮುಖ್ಯ ಸಚೇತಕ ಸತೀಶ್‌ರೆಡ್ಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾರ್ಡ್ ಮೀಸಲಾತಿಯಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಉಲ್ಲಂಘನೆಯಾಗಿದ್ದರೆ ತೋರಿಸಿ ಎಂದು ಸವಾಲು ಹಾಕಿ ಕಾಂಗ್ರೆಸ್‌ನವರಿಗೆ ಚುನಾವಣೆ ಬೇಕಿಲ್ಲ ಎಂದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ೧೫೦ ಸ್ಥಾನ ಗೆಲ್ಲಲಿದೆ ಎಂಬ ಸಮೀಕ್ಷೆ ವರದಿಗಳು ಕಾಂಗ್ರೆಸ್‌ಗೆ ಸಿಕ್ಕಿದೆ. ಕಾಂಗ್ರೆಸ್ ಆತ್ಮವಿಶ್ವಾಸ ಕಳೆದುಕೊಂಡಿದೆ. ಚುನಾವಣೆಗೂ ಮೊದಲೇ ಸೋಲು ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ ಇವರು, ಅದಕ್ಕಾಗಿ ಅವರು ಚುನಾವಣೆ ಮುಂದಕ್ಕೆ ಹಾಕಲು ಪ್ರಯತ್ನ ನಡೆಸಿದ್ದಾರೆ. ನಮ್ಮ ಮೇಲೆ ಆರೋಪ ಮಾಡುವುದು ಬೇಡ, ಎಲ್ಲವೂ ಕಾನೂನಿನಂತೆ ಆಗಿದೆ ಎಂದರು.
ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುವುದು ಬಿಡುವುದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ನಾವಂತೂ ಚುನಾವಣೆಗೆ ಸಿದ್ಧರಿದ್ದೇವೆ ಎಂದರು.
ಮೀಸಲಾತಿ ಈಗ ದೊಡ್ಡ ಸವಾಲಾಗಿದೆ. ವಿವಿಧ ರಾಜ್ಯಗಳಲ್ಲಿ ಎಂಪೇರಿಕಲ್ ಡೇಟಾ ಆಧಾರದ ಮೇಲೆ ಮೀಸಲಾತಿ ನಿಗದಿಯಾಗಿದೆ. ನಮ್ಮಲ್ಲೂ ಸರ್ಕಾರ ಅದೇ ರೀತಿ ಮಾಡಿದೆ. ಶೇ. ೫೦ರಷ್ಟು ಓಬಿಸಿ ಮಹಿಳೆಯರಿಗೆ ಮೀಸಲಾತಿ ನೀಡಿ, ಶೇ. ೫೦ರಷ್ಟು ಸಾಮಾನ್ಯ ವರ್ಗಕ್ಕೆ ಸ್ಥಾನಗಳನ್ನು ನಿಗದಿ ಮಾಡಲಾಗಿದೆ ಎಂದರು.
ಮೀಸಲಾತಿ ವಿರೋಧಿಸಿ ಕಾಂಗ್ರೆಸ್ ಪಕ್ಷ ನಿನ್ನೆ ವಿಕಾಸಸೌಧದಲ್ಲಿ ಗೂಂಡಾಗಿರಿ ನಡೆಸಿದೆ. ಇದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ. ಕಾನೂನನ್ನು ಗಾಳಿಗೆ ತೂರಿ ಈ ರೀತಿ ವಿಕಾಸಸೌಧದಲ್ಲಿ ಪ್ರತಿಭಟನೆ ನಡೆಸಿರುವುದನ್ನು ನೋಡಿದರೆ ಇವರಿಗೆ ಕಾನೂನು ಗೊತ್ತಿದೆಯೇ ಇಲ್ಲವೇ ಎಂದು ವ್ಯಂಗ್ಯವಾಡಿದರು.