ಕಾನೂನು ಪದವಿ ಮುಂದುವರಿಕೆಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ, ನ 3- ಸರ್. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂರು ವರ್ಷದ ಕಾನೂನು ಪದವಿ ಸ್ಥಗಿತಗೊಳಿಸಿದ್ದು ಖಂಡಿಸಿ ಹಾಗೂ ತಕ್ಷಣ ಕೋರ್ಸ್ ಆರಂಭಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸರ್.ಸಿದ್ದಪ್ಪ ಕಂಬಳಿ ಕಾಲೇಜು ಎದುರಿಗೆ ಇಂದು ಪ್ರತಿಭಟನೆ ನಡೆಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇರಿಸಿ, ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದ ಕಾರ್ಯಕರ್ತರು, ಕರ್ನಾಟಕ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಪದವಿ ಬಂದ್ ಮಾಡಿದ್ದು ಖಂಡಿಸಿ, ಈಗಾಗಲೇ ಸರ್.ಸಿದ್ದಪ್ಪ ಕಂಬಳಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನಾಲ್ಕು ಭಾರಿ ಮನವಿ ಸಲ್ಲಿಸಿದರೂ, ಕೋರ್ಸ್ ಆರಂಭಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ಸಂಘಟನೆ ಮನವಿಗೂ ಸ್ಪಂದಿಸಿಲ್ಲ ಎಂದು ದೂರಿದರು.
ಮೂರು ತಿಂಗಳಿಂದ ಹೋರಾಟ ಮಾಡುತ್ತಿದ್ದರೂ, ಸ್ಪಂದಿಸಿಲ್ಲ. ತಕ್ಷಣವೇ ಎಚ್ಚೆತ್ತು ಸರ್. ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂರು ವರ್ಷದ ಕಾನೂನು ಪದವಿ ಆರಂಭಕ್ಕೆ ಆಗ್ರಹಿಸಿ, ಪ್ರಾಚಾರ್ಯ ಕುಲಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ, ಜಿಲ್ಲಾ ಸಂಚಾಲಕ ಹನುಮಂತ ಬಗಲಿ, ಶಿವಾನಂದ ಕಂಠೀಕರ, ಶ್ರೀಕಾಂತ್ ಕೆಂಪಲಿಂಗಣ್ಣವರ, ಎನ್.ನಿರಜ್, ಅನುಪಮಾ ಪೂಜಾರ, ಪೂರ್ಣಾ ಅನೇಕರು ಇದ್ದರು.