ಕಾನೂನು ನೆರವು ಸಹಾಯವಾಣಿ ಆರಂಭ

ದಾವಣಗೆರೆ ಮೇ.3: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನಸಾಮಾನ್ಯರಿಗೆ ಕಾನೂನು ಸೇವೆ ಒದಗಿಸಲು ಕಾನೂನು ಸೇವೆ ಒದಗಿಸಲು ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿಯೂ ಕಾನೂನು ಸೇವಾ ಸಹಾಯವಾಣಿಯನ್ನು ಆರಂಭಿಸಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನರಿಗೆ ಕಾನೂನು ಸೇವೆ ಒದಗಿಸಲು 1800-425-90900 ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಹಾಯವಾಣಿ ಕೇಂದ್ರದಲ್ಲಿ 03 ಜನ ಪ್ಯಾನಲ್ ವಕೀಲರು ಕಾರ್ಯ ನಿರ್ವಹಿಸುತಿದ್ದಾರೆ. ಕೋವಿಡ್-19 ಎರಡನೆ ಅಲೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿಯೂ ಸಹ ಕಾನೂನು ಸೇವಾ ಸಹಾಯವಾಣಿ ಸಂಖ್ಯೆ 08192-296364, ಮೊಬೈಲ್ 9481167005 ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಈ ಸಹಾಯವಾಣಿಯ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೋವಿಡ್ ಜಾಗೃತಿ ಅಭಿಯಾನ : ‘ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ’ ಎಂಬ ಸಂದೇಶವುಳ್ಳ ಫಲಕಗಳನ್ನು ಪ್ರದರ್ಶಿಸುವ ಮೂಲಕ ದಾವಣಗೆರೆಯ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಕೋವಿಡ್ ಜಾಗೃತಿ ಅಭಿಯಾನವನ್ನು ಇತ್ತೀಚೆಗೆ ಕೈಗೊಳ್ಳಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ನ್ಯಾಯಾಲಯ ಆವರಣದಲ್ಲಿ ಕೋವಿಡ್ ಜಾಗೃತಿ ಸಂದೇಶವನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕೋವಿಡ್ 19 ಸೋಂಕನ್ನು ಸಮರ್ಪಕವಾಗಿ ಎದುರಿಸಲು ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲ ಅರ್ಹರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಗ್ರಾಮಗಳಿಂದ ನಗರಕ್ಕೆ ಅನಾವಶ್ಯಕವಾಗಿ ಬರುವುದನ್ನು ತಕ್ಷಣ ನಿಲ್ಲಿಸಬೇಕು. ಮದುವೆ, ಸಭೆ ಸಮಾರಂಭಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಕಾಲಕಾಲಕ್ಕೆ ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಜರ್‌ನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಅಗತ್ಯವಿಲ್ಲದ ಪ್ರಕರಣಗಳಲ್ಲಿ ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಈಗಾಗಲೆ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿದ್ದು, ತೀರ ಅತ್ಯಗತ್ಯ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಬೇಕು. ಕೋವಿಡ್‌ನ ಯಾವುದೇ ನಿಯಮವನ್ನು ಉಲ್ಲಂಘಿಸಿದಲ್ಲಿ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಸಾರ್ವಜನಿಕರು ಸಾಧ್ಯವಾದ ಮಟ್ಟಿಗೆ ತಮ್ಮ ಮನೆಯಲ್ಲಿಯೇ ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಅವರು ಮನವಿ ಮಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಸೇರಿದಂತೆ ವಿವಿಧ ನ್ಯಾಯಾಧೀಶರುಗಳು, ವಕೀಲರು ಪಾಲ್ಗೊಂಡಿದರು.