ಕಾನೂನು ನೆರವು ಅಭಿರಕ್ಷಕರ ಕಚೇರಿ ಉದ್ಘಾಟನೆ


ಬಳ್ಳಾರಿ,ಜ.15: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇವರ ನಿರ್ದೇಶನ ಮೇರೆಗೆ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿನ ಎಡಿಆರ್ ಕಟ್ಟಡದ ಒಂದನೇ ಮಹಡಿಯಲ್ಲಿ ಕಾನೂನು ನೆರವು ಅಭಿರಕ್ಷಕರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನದ ಕಲಂ 39ಎ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನ್ಯಾಯವನ್ನು ಪಡೆಯುವ ಹಕ್ಕನ್ನು ನೀಡಲಾಗಿದ್ದು, ಸದರಿ ಹಕ್ಕನ್ನು ಪಡೆಯುವಲ್ಲಿ ಆರ್ಥಿಕ ಸ್ಥಿತಿ ಅಡೆತಡೆಯಾಗದಂತೆ ಪ್ರತಿಯೊಬ್ಬರಿಗೂ ಕಾನೂನು ನೆರವನ್ನು ಒದಗಿಸುವ ಉದ್ದೇಶದಿಂದ ಕಚೇರಿ ಆರಂಭಿಸಲಾಗಿದೆ ಎಂದು ಹೇಳಿದರು.
ಈ ಕಚೇರಿಗಳಲ್ಲಿ ಮುಖ್ಯ ಕಾನೂನು ಅಭಿರಕ್ಷಕರು, ಉಪಮುಖ್ಯ ಮತ್ತು ಸಹಾಯಕ ಕಾನೂನು ಅಭಿರಕ್ಷಕರು ನಿಯುಕ್ತಿಯಾಗಿದ್ದು, ಇವರುಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಅಪರಾಧಿ ವ್ಯಕ್ತಿಗಳಿಗೆ ನ್ಯಾಯಾಲಯದಲ್ಲಿ ಉಚಿತವಾಗಿ ಪ್ರಕರಣವನ್ನು ನಡೆಸಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ 16 ಜಿಲ್ಲೆಗಳಲ್ಲಿ ಈ ಕಚೇರಿಗಳನ್ನು ಆರಂಭಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸತೀಶ್ ಜೆ.ಬಾಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎರ್ರಿಗೌಡ, ಕಾನೂನು ನೆರವು ಅಭಿರಕ್ಷಕರ ಕಚೇರಿಯ ವಕೀಲರು ಹಾಗೂ ಇತರರು ಇದ್ದರು.